ಬೆಳ್ಮಣ್, ಡಿ 19(SM): ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ 1ರಲ್ಲಿ ಟೋಲ್ ಗೇಟ್ ನಿರ್ಮಿಸಿ ಸುಂಕ ವಸೂಲಿಗೆ ಮುಂದಾಗಿರುವ ಸರ್ಕಾರದ ವಿರುದ್ದ ಬೆಳ್ಮಣ್ ಟೋಲ್ ವಿರೋಧಿ ಹೋರಾಟ ಸಮೀತಿ ವತಿಯಿಂದ ಡಿಸೆಂಬರ್ ೨೦ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಬಗ್ಗೆ ಪೂರ್ವಭಾವಿ ಸಭೆ ಬೆಳ್ಮಣ್ ಬಸ್ಸು ನಿಲ್ದಾಣದಲ್ಲಿ ಬುಧವಾರ ನಡೆಯಿತು.
ಡಿಸೆಂಬರ್ 20ರಂದು ಕಾರ್ಕಳದಿಂದ ಪಡುಬಿದ್ರೆ ವರೆಗಿನ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಲಿದೆ. ಹಾಗೂ ಬಸ್ಸು, ಲಾರಿ, ಕಾರು, ರಿಕ್ಷಾ ಎಲ್ಲವೂ ಸ್ಥಗಿತಗೊಳ್ಳಲಿದ್ದು ಪ್ರತಿಭಟನಾ ಸಭೆಯಲ್ಲಿ ೧೦ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ಎಲ್ಲಾ ನಿರೀಕ್ಷೆ ಇದೆ ಎಂದು ಹೋರಾಟ ಸಮೀತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ತಿಳಿಸಿದರು.
ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸುಹಾಸ್ ಹೆಗ್ಡೆ ಮಾತನಾಡಿ, ಯಾವುದೇ ಕಾರಣಕ್ಕೂ ಪಡುಬಿದ್ರೆ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಟೋಲ್ ನಿರ್ಮಾಣ ಬಿಡಿ ಒಂದು ಬುಟ್ಟಿ ಜಲ್ಲಿ ಬೀಳಲು ನಾವು ಬಿಡುವುದಿಲ್ಲ ಎಂದರು.
ಇನ್ನು ಡಿ. 20ರಂದು ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಲಿದೆ. ಬೆಳಿಗ್ಗೆ 9 ಗಂಟೆಯಿಂದ ಪ್ರತಿಭಟನಾ ಮೆರವಣಿಗೆ ನಡೆದು ಬಳಿಕ ಬಸ್ಸು ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.