ಮಂಗಳೂರು, ಡಿ 19(SM): ಅಕ್ರಮ ಗೋಸಾಗಾಟ ನಡೆಸೋವಾಗ ಅವುಗಳ ವಿರುದ್ಧ ಕಹಳೆ ಮೊಳಗಿಸೋರೂ, ಹೋರಾಟ ನಡೆಸುವವರು ಅದೆಷ್ಟೋ ಮಂದಿ ಇರುತ್ತಾರೆ. ಅದೇ ಗೋವುಗಳನ್ನು ರಕ್ಷಿಸಿದರೆ ಅವುಗಳನ್ನು ಉಳಿಸಿ ಸಾಕುವವರು ಮಾತ್ರ ಯಾರೂ ಇರಲ್ಲ. ಕಡೆಯದಾಗಿ ಗೋಶಾಲೆಗಳೂ ಕೂಡ ಗೋವುಗಳಿಗೆ ರಕ್ಷಣೆ ನೀಡೋ ಕೆಲಸವನ್ನು ಮಾಡುತ್ತಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನ ದಿನಗಳ ಹಿಂದೆ ಮಂಗಳೂರಿನಲ್ಲಿ ರಕ್ಷಿಸಲ್ಪಟ್ಟ ಗೋವುಗಳು. ಗೋವುಗಳಿಗೆ ರಕ್ಷಣೆ ನೀಡಬೇಕಾದ ಗೋಶಾಲೆಗಳು ಗೂವುಗಳನ್ನು ತೊರೆದಾದ ಅವುಗಳಿಗೆ ರಕ್ಷಣೆ ನೀಡಿರೋದು ಓರ್ವ ಗೋಪ್ರೇಮಿ. ಇವರ ಅಕ್ರಮ ಸಾಗಾಟದ ವೇಳೆ ಸೆರೆ ಸಿಕ್ಕ ಗೋವುಗಳಿಗೆ ತಮ್ಮ ಜಮೀನಿನಲ್ಲಿ ರಕ್ಷಣೆಯನ್ನು ನೀಡಿದ್ದಾರೆ.
ಅಕ್ರಮವಾಗಿ ಗೋವುಗಳನ್ನು ಸಾಗಾಟ ನಡೆಸುವ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆಗಿಳಿದ ಕಂಕನಾಡಿ ನಗರ ಠಾಣಾ ಪೊಲೀಸರು ಹೋರಿಗಳು ಹಾಗೂ ಎಮ್ಮೆಗಳು ಸೇರಿದಂತೆ ಸುಮಾರು 24 ಗೋವುಗಳನ್ನು ದಿನಗಳ ಹಿಂದೆಯಷ್ಟೇ ರಕ್ಷಿಸಿದ್ದಾರೆ. ಪೊಲೀಸರೇನೋ ತಮ್ಮ ಕಾರ್ಯವನ್ನು ನಿಯತ್ತಿನಿಂದಲೇ ಮಾಡಿಮುಗಿಸಿದ್ದಾರೆ. ಬಳಿಕ ಅವುಗಳನ್ನು ಗೋ ಶಾಲೆಗಳಿಗೆ ಹಸ್ತಾಂತರಿಸುವುದು ವಾಡಿಕೆ. ಅದರಂತೆ ಕಂಕನಾಡಿ ಠಾಣಾ ಪೊಲೀಸರು ಜಿಲ್ಲೆಯಲ್ಲಿರುವ ಬಹುತೇಕ ಗೋಶಾಲೆಗಳನ್ನು ಸಂಪರ್ಕಿಸಿದ್ದಾರೆ. ಆದರೆ, ಗೋ ಶಾಲೆಗಳು ಮಾತ್ರ ಗೋವುಗಳನ್ನು ಸೇರಿಸಿಕೊಳ್ಳೋಕೆ ಹಿಂದೇಟನ್ನು ಹಾಕಿವೆ. ಗೋ ಶಾಲೆಗಳ ಈ ನಿಲುವು ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸರಕಾರಿ ಭೂಮಿ, ಸರಕಾರಿ ಅನುದಾನ ಪಡೆಯುತ್ತಿರುವಂತಹ ಗೋಶಾಲೆಗಳು ಗೋವುಗಳ ರಕ್ಷಣೆಯ ಹೊಣೆಯನ್ನು ಹೊರುತ್ತಿಲ್ಲ. ಹತ್ತಾರು ಚಟುವಟಿಕೆಗಳನ್ನು ಇವುಗಳು ನಡೆಸುತ್ತಾರೆ. ಆದ್ರೆ, ಮುಖ್ಯವಾಗಿ ನಡೆಸಬೇಕಾದ ಕಾರ್ಯವನ್ನು ಮಾತ್ರ ಗೋಶಾಲೆಗಳು ಮಾಡುತ್ತಿಲ್ಲ. ಗೋವುಗಳ ಸಾಗಾಟದ ಸಂದರ್ಭದಲ್ಲಿ ಹೋರಾಟಗಳ ಸಂದರ್ಭ ಮುಂಚೂನಿಯಲ್ಲಿದ್ದುಕೊಂಡು ಹಾಗೂ ಅನುದಾನ ಬಿಡುಗಡೆಯ ಸಂದರ್ಭದಲ್ಲಿ ಅಂಗಲಾಚುವ ಗೋಶಾಲೆಗಳ ಮಾಲಕರು ಗೋವುಗಳ ರಕ್ಷಣೆಗೆ ಯಾಕೆ ಮುಂದಾಗುತ್ತಿಲ್ಲ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಇತ್ತೀಚಿಗಷ್ಟೇ 12.9 ಲಕ್ಷ ರೂಪಾಯಿ ಅನುದಾನವನ್ನು ಫಜೀರು ಗೋಶಾಲೆಗೆ ಸರಕಾರ ನೀಡಿದೆ. ಅಲ್ಲದೆ ವಿವಿಧ ಗೋ ಶಾಲೆಗಳಿಗೂ ಅನುದಾನವನ್ನು ಸರಕಾರ ನೀಡಿದೆ. ಆದರೆ, ಅಕ್ರಮವಾಗಿ ಸಾಗಾಟ ನಡೆಸುವ ಸಂದರ್ಭ ರಕ್ಷಿಸಲ್ಪಟ್ಟ ಗೋವುಗಳಿಗೆ ಮಾತ್ರ ಈ ಗೋಶಾಲೆಗಳ ಬಾಗಿಲೇ ಮುಚ್ಚಿದಂತಾಗಿದ್ದು, ಇಂತಹ ಗೋಶಾಲೆಗಳಿಗೆ ಸರಕಾರದ ಅನುದಾನ ಅಗತ್ಯ ಇದೆಯಾ ಅನ್ನೋದು ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆಯಾಗಿದೆ.
ಚುನಾವಣೆ ಬಂದಾಗ ಗೋರಕ್ಷಣೆಯ ಹೆಸರಿನಲ್ಲಿ ಹೋರಾಟ ನಡೆಸುವವರು ಹಾಗೂ ಅಕ್ರಮ ಗೋಸಾಗಾಟದ ಸಂದರ್ಭದಲ್ಲಿ ಗೋ ರಕ್ಷಕರೆಂದೆನಿಸುವವರು ಗೋ ರಕ್ಷಣೆಗೆ ನೈಜ ಒಲವನ್ನು ತೋರಬೇಕಾದ ಅಗತ್ಯವಿದೆ.