ಕಾಪು, ಡಿ 19(SM): ಕುರ್ಕಾಲು-ಮಣಿಪುರ ಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಜಂಟಿ ದಾಳಿ ನಡೆಸಿದ ಗಣಿ, ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಎರಡು ದೋಣಿ ಸಹಿತ ಎರಡು ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಕುರ್ಕಾಲು-ಮಣಿಪುರ ಹೊಳೆ ತೀರದ ನಾಯ್ಕರ ತೋಟದ ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಂಗಳವಾರ ರಾತ್ರಿ ದೊರಕಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿತ್ತು. ದಾಳಿಯ ಸಂದರ್ಭ ಮರಳುಗಾರಿಕೆ ನಡೆಸುತ್ತಿದ್ದ ನಾಲ್ಕು ಮಂದಿ ಕಾರ್ಮಿಕರು ಪರಾರಿಯಾಗಿದ್ದಾರೆ. ಮರಳುಗಾರಿಕೆಗೆ ಬಳಸುತ್ತಿದ್ದ ಎರಡು ದೋಣಿ, ಉಪಕರಣಗಳು ಮತ್ತು ದೋಣಿ ಮೂಲಕ ಸಾಗಿಸಿ ತರಲಾಗಿದ್ದ ಎರಡು ಮೆಟ್ರಿಕ್ ಟನ್ನಷ್ಟು ಮರಳನ್ನು ಸ್ವಾದೀನಕ್ಕೆ ತೆಗೆದುಕೊಳ್ಳಲಾಗಿದೆ.
ಮಣಿಪುರ-ಕುರ್ಕಾಲು ಪರಿಸರದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಪುರಂದರ್ ಮತ್ತು ಮರಳು ಸಂಗ್ರಹಕ್ಕೆ ಅವಕಾಶ ಮಾಡಿಕೊಡುತ್ತಿದ್ದ ಜಾಗದ ಮಾಲಕ ಡೇನಿಯಲ್ ಕರ್ಕಡ ಅವರ ಮೇಲೆ ಪೊಲೀಸ್ ಠಾಣೆಗೆ ಖಾಸಗಿ ದೂರು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸಂಜೆ 7 ಗಂಟೆಯ ವೇಳೆಗೆ ಮಣಿಪುರ ಹೊಳೆಯಲ್ಲಿ ಕಾರ್ಮಿಕರು ಎರಡು ದೋಣಿಗಳ ಮೂಲಕ ತೆರಳಿ ಮರಳು ತೆಗೆಯುತ್ತಿದ್ದಾರೆ ಎಂಬ ವಿಚಾರ ಸ್ಥಳೀಯರ ಮೂಲಕ ಕಾಪು ವೃತ್ತ ನಿರೀಕ್ಷಕರಿಗೆ ಮತ್ತು ಸಂಬಂಧಪಟ್ಟ ಟಾಸ್ಕ್ಪೋರ್ಸ್ ಇಲಾಖೆಯ ಅಧಿಕಾರಿಗಳಿಗೆ ತಿಳಿದು ಬಂದಿತ್ತು. ಅದರಂತೆ ಅಧಿಕಾರಿಗಳು ಪೊಲೀಸರ ಜೊತೆಗೂಡಿ ತತ್ಕ್ಷಣ ಸ್ಥಳಕ್ಕೆ ಧಾವಿಸಿ, ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿದ್ದಾರೆ.