ಕಾರ್ಕಳ, ಡಿ 19(SM): ಮುದ್ರಾಡಿ ದನ ಕಳವು ಪ್ರಕರಣ ಹಾಗೂ ಸೋಮೇಶ್ವರದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಹಾಲ್ ಮೂರ್ತಿ ರಾವ್ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾಗಿದ್ದ ಆರೋಪಿ ಕುಖ್ಯಾತ ದನಕಳ್ಳನೆಂಬ ಮಹತ್ವದ ವಿಚಾರ ತನಿಖೆಯ ಹಂತದಲ್ಲಿ ಬೆಳಕಿಗೆ ಬಂದಿದೆ.
ಮಹಮ್ಮದ್ ಶರೀಫ್ ಅಲಿಯಾಸ್ ಮಿಲಿಟ್ರಿ ಶರೀಫ್(44) ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿದ್ದಾನೆ. ಮಂಗಳೂರು ಕಸಬಾ ಬೇಂಗ್ರೆ ನಿವಾಸಿಯಾಗಿರುವ ಆರೋಪಿಯ ವಿರುದ್ಧ ಕೊಡಗು, ಮಡಿಕೇರಿ, ಕುಶಾಲ ನಗರ, ಸೋಮವಾರ ಪೇಟೆ, ಶನಿವಾರಸಂತೆ, ಮಂಗಳೂರು, ಕೊಣಾಜೆ, ಬಜ್ಪೆ ಪೊಲೀಸ್ ಠಾಣೆಗಳಲ್ಲಿ ದನ ಕಳವು ಪ್ರಕರಣ ದಾಖಲಾಗಿವೆ.
ಕೊಡಗು ಜಿಲ್ಲೆಗಳ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಯಲಯದಿಂದ 12 ದಸ್ತಗಿರಿ ವಾರಂಟ್ ಈತನ ಮೇಲಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಮಡಿಕೇರಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.