Karavali
ಕುಂದಾಪುರ: ರಜತ ಮಹೋತ್ಸವದ ಸಂಭ್ರಮದಲ್ಲಿ ಕಂಡ್ಲೂರಿನ ರಾಮ್ಸನ್ ಸರ್ಕಾರಿ ಪ್ರೌಢಶಾಲೆ
- Wed, Dec 19 2018 04:21:23 PM
-
ಕುಂದಾಪುರ,ಡಿ 19 (MSP):ವಿಶಿಷ್ಠ ಶೈಕ್ಷಣಿಕ ಹಿನ್ನೆಲೆ, ಅದ್ಭುತ ಪ್ರಾಕೃತಿಕ ಸೌಂದರ್ಯದ ನಡುವೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರೌಢಶಿಕ್ಷಣದ ಕನಸಿನೊಂದಿಗೆ 25 ವರ್ಷಗಳ ಪೂರ್ವದಲ್ಲಿ ಉದಯವಾದ ಕಾವ್ರಾಡಿ ಗ್ರಾಮದ ಕಂಡ್ಲೂರಿನ ರಾಮ್ಸನ್ ಪ್ರೌಢಶಾಲೆಗೆ ಈಗ ಬೆಳ್ಳಿ ಹಬ್ಬದ ಸಡಗರ. ಈ ಪ್ರೌಢಶಾಲೆಯ ಇತಿಹಾಸದ ಪುಟದಲ್ಲಿ ಬೆಳ್ಳಿಚುಕ್ಕಿ ಮೂಡುವ ಸುಸಂದರ್ಭ. ರಜತ ಮಹೋತ್ಸವದ ಸ್ಮರಣೀಯ ಕ್ಷಣಕ್ಕೆ ಕಂಡ್ಲೂರು ಸನ್ನಹಗೊಳ್ಳುತ್ತಿದೆ.
1993ರಲ್ಲಿ ಸ್ಥಳೀಯ ಹಿರಿಯರು, ವಿದ್ಯಾಭಿಮಾನಿಗಳು ಸರ್ಕಾರದ ಆರ್ಥಿಕ ನೆರವಿನೊಂದಿಗೆ ಅವಿರ್ಭವಿಸಿದ ಈ ಸಂಸ್ಥೆ ಇವತ್ತು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಅಂದಿನ ದಿನಗಳಲ್ಲಿ ಕಾವ್ರಾಡಿ ಸುತ್ತಮುತ್ತ ಗ್ರಾಮದ ಗ್ರಾಮೀಣ ಪ್ರದೇಶದಲ್ಲಿ ಪ್ರೌಢಶಾಲೆಯ ಕೊರತೆ ಇತ್ತು. ಮುಖ್ಯವಾಗಿ ಹೆಣ್ಣು ಮಕ್ಕಳು ಹೈಸ್ಕೂಲ್ ಶಿಕ್ಷಣದಿಂದ ವಂಚಿತರಾಗುವ ಸಂಭವವಿತ್ತು. ಇದನ್ನು ಮನಗಂಡ ಅಂದಿನ ವಿದ್ಯಾಭಿಮಾನಿಗಳು, ಶಿಕ್ಷಣ ಪ್ರೇಮಿ ದಿ.ಕೆಂಚನೂರು ಮಹಾಬಲ ಶೆಟ್ಟಿ, ದಿ|ಮೊಹಿದ್ದಿನ್ ಸಾಹೇಬ್ ಮೊದಲಾದವರ ಸಂಘಟಿತ ಪ್ರಯತ್ನ ಹಾಗೂ ಎಲ್ಲಾ ಗ್ರಾಮಸ್ಥರ ಶ್ರಮದೊಂದಿಗೆ ಅಸ್ತಿತ್ವಕ್ಕೆ ಬಂದ ಈ ಶಿಕ್ಷಣ ಸಂಸ್ಥೆ ಆರಂಭದಲ್ಲಿ ಹಲವು ಅಡೆತಡೆ ಎದುರಿಸಿದರೂ ದಾನಿಗಳ, ಸಾರ್ವಜನಿಕರ ಸಹಕಾರ, ಸಹಭಾಗಿತ್ವದಿಂದ ವಿದ್ಯಾರ್ಥಿಸ್ನೇಹಿ ಶೈಕ್ಷಣಿಕ ಸೌಲಭ್ಯಗಳು ಹಂತಹಂತವಾಗಿ ಸಾಕಾರಗೊಳ್ಳುತ್ತಾಬಂದಿವೆ.
ಈ ಶಾಲೆಯು ಪ್ರಾರಂಭಿಕ ವರ್ಷಗಳಲ್ಲಿ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಸುತ್ತಮುತ್ತ ಪ್ರೌಢಶಾಲೆಗಳ ಆರಂಭ ಹಾಗೂ ಖಾಸಗಿ ಶಾಲೆಗಳಿಂದ ಮಕ್ಕಳ ಸಂಖ್ಯೆ ಇಳಿಯುತ್ತಿದೆ. ಆದರೆ ಕಳೆದ ಮೂರು ವರ್ಷಗಳಿಂದ ಆಂಗ್ಲ ಮಾಧ್ಯಮ ವಿಭಾಗವನ್ನುತೆರೆದಿದ್ದು ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಚೇತರಿಕೆಯಾಗಿದೆ. ಈ ಶಿಕ್ಷಣಸಂಸ್ಥೆ ಪ್ರಾರಂಭದಿಂದಲೂಗುಣಮಟ್ಟದ ಶಿಕ್ಷಣ, ಪಾಠ ಪೂರಕ ಚಟುವಟಿಕೆಗಳಿಗೆ ಹೆಸರಾಗಿದ್ದು, ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ಕ್ರೀಡೆ, ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗುತ್ತಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಮಗ್ರವಾಗಿರೂಪಿಸುವ ನಿಟ್ಟಿನಲ್ಲಿ ಕಾಲದಿಂದ ಕಾಲಕ್ಕೆ ವಿಭಿನ್ನ ಮಾದರಿಯ ಕ್ರಿಯಾಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸಲಾಗುತ್ತಿದೆ. ಒಟ್ಟಾರೆ ಶಿಕ್ಷಣ ಪರಿಪೂರ್ಣತೆಯ ಫಲವಾಗಿ ಇಲ್ಲಿಕಲಿತ, ಕಲಿಯುತ್ತಿರುವ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ್ದಾರೆ.
ಪ್ರಸ್ತುತ ಈ ಸಂಸ್ಥೆಯಲ್ಲಿ ಕಂಡ್ಲೂರು, ಹಳ್ನಾಡು, ಪಡುವಾಲ್ತೂರು, ಮೂಡುವಾಲ್ತೂರು, ಸೌಕೂರು, ಮರಾಸಿ,ಕಾವ್ರಾಡಿ, ಬಳ್ಕೂರು, ನೆಲ್ಲಿಕಟ್ಟೆ ಮೊದಲಾದ ಭಾಗಗಳಿಂದ ಬರುವ ವಿದ್ಯಾರ್ಥಿಗಳು ವಿದ್ಯಾರ್ಜನೆಮಾಡುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ವಿಭಾಗಗಳು ಇಲ್ಲಿದ್ದು,ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ಕ್ಲಾಸ್, ಕ್ರೀಡೆಗೆಅಗತ್ಯವಿರುವವಿಶಾಲ ಕ್ರೀಡಾಂಗಣ, ಕಲಿಕೆಗೆ ಪೂರಕವಾದ ವಾತಾವರಣ ಇಲ್ಲಿದೆ. ಮುಖ್ಯರಸ್ತೆಯಿಂದತುಸು ಒಳಗಡೆ ಶಾಲೆ ಇರುವುದರಿಂದಕಲಿಕೆಗೆ ಪ್ರಶಾಂತವಾದ ವಾತಾವರಣವಿದೆ.
ಗುಣಮಟ್ಟದ ಶಿಕ್ಷಣ,ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕ ವಾತಾವರಣವಿರುವ ಈ ಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಗಳಲ್ಲೂ ಭಾಗವಹಿಸಿದ್ದಾರೆ. ಉಮೇಶ ನಾಯಕ್ ಎನ್ನುವ ವಿದ್ಯಾರ್ಥಿ ಸ್ವಿಜರ್ಲ್ಯಾಂಡ್ನಲ್ಲಿ ನಡೆದ ಮಕ್ಕಳ ಮೇಳದಲ್ಲಿ ಭಾಗವಹಿಸಿದ್ದಾನೆ. ಪ್ರತಿ ವರ್ಷವೂ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಗಣನೀಯ ಸಾಧನೆಗೆ ಸರ್ಕಾರದಿಂದ ಪ್ರಮಾಣ ಪತ್ರಗಳು ಲಭಿಸಿವೆ.
ಕಂಡ್ಲೂರು ಸುತ್ತಮುತ್ತಲಿನ ಪರಿಸರದ ಜ್ಞಾನಜ್ಯೋತಿ ಸ್ವರೂಪವಾದ ಈ ಶಾಲೆಯ ರಜತಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು ಎನ್ನುವ ನೆಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಜನಪ್ರತಿನಿಧಿಗಳು, ಶಿಕ್ಷಕರು, ಹಳೆವಿದ್ಯಾರ್ಥಿಗಳು, ಸಾರ್ವಜನಿಕರು, ವಿದ್ಯಾಭಿಮಾನಿಗಳು ಸೇರಿ ರಜತ ಮಹೋತ್ಸವ ಸಮಿತಿಯನ್ನು ರಚಿಸಿಲಾಯಿತು. ಸಮಿತಿಯ ಅಧ್ಯಕ್ಷರನ್ನಾಗಿ ದೇವಾನಂದ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ರಜತಮಹೋತ್ಸವ ಆಚರಣೆ ಹಾಗೂ ಶಾಲಾಭಿವೃದ್ಧಿಯ ಅಂಗವಾಗಿ ಸುಮಾರುರೂ. 15,50,000 ವೆಚ್ಚದ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತವಾಗಲಾಯಿತು.
ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಸಾರ್ವಜನಿಕರ ಸಕ್ರೀಯ ಸಹಕಾರ, ಪ್ರೋತ್ಸಾಹದಿಂದರಜತಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ರಜತ ಮಹೋತ್ಸವವನ್ನು ಸ್ಮರಣೀಯವನ್ನಾಗಿಸುವ ನೆಲೆಯಲ್ಲಿಕೂಡಾಕಾರ್ಯಪ್ರವೃತ್ತವಾಗಲಾಗಿದೆ.ಪ್ರಸ್ತುತ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿಯಾಗಿ ಶ್ರೀಮತಿ ನಾಗಮ್ಮ ನಾಯಕ್ಹಾಗೂ 6 ಸಹಶಿಕ್ಷರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲಾಭಿವೃದ್ದಿ ಸಮಿತಿಅಧ್ಯಕ್ಷರಾಗಿ ಸಾಮ್ರಾಟ್ ಶೆಟ್ಟಿ ಹಳ್ನಾಡು, ಹಳೆ ವಿದ್ಯಾರ್ಥಿ ಸಂಘದಅಧ್ಯಕ್ಷರಾಗಿ ಪ್ರೇಮಾನಂದ ಶೆಟ್ಟಿ ಹಳ್ನಾಡು ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾಭಿಮಾನಿಗಳ ನೆರವಿನ ಅಗತ್ಯವಿದೆ
ಜಿಲ್ಲಾಪಂಚಾಯತ್ ಅನುದಾನದಿಂದ ಶಾಲೆಗೆ ಸುಣ್ಣ-ಬಣ್ಣ ನಡೆಯುತ್ತಿದ್ದು, ಸಭಾಭವನ ನನವೀಕರಣ, ಬಯಲು ರಂಗ ಮಂದಿರಕ್ಕೆ ಗ್ರಿಲ್ಸ್ ಅಳವಡಿಕೆ, ಕಿಟಕಿ ಬಾಗಿಲುಗಳ ದುರಸ್ತಿ, ಇಂಗ್ಲಿಷ್ ಸಂವಹನ ತರಗತಿ ನಿರ್ವಹಣೆ, ಸಿಸಿ ಕ್ಯಾಮೆರಾ ಅಳವಡಿಕೆ, ಮೈನ್ಗೇಟ್ ನಿರ್ಮಾಣ, ನೀರಿನ ಪೈಪ್ಲೈನ್ ಅಳವಡಿಕೆ, ಉದ್ಯಾನವನ ನಿರ್ಮಾಣ, ವಿದ್ಯುತ್ ಕಾಮಗಾರಿ, ಆಟದ ಮೈದಾನಕ್ಕೆ ಮೆಟ್ಟಿಲು ರಚನೆ ಸಹಿತ ಶಾಲೆಯ ಸರ್ವಾಂಗೀಣ ಅಭಿವೃದ್ದಿ ದೃಷ್ಟಿಯಿಂದ ಯೋಜನೆ ರೂಪಿಸಲಾಗಿದೆ. ಈ ಎಲ್ಲ ಅಭಿವೃದ್ದಿ ಕಾರ್ಯಕ್ಕೆ ಹಳೆವಿದ್ಯಾರ್ಥಿಗಳು, ದಾನಿಗಳು, ವಿದ್ಯಾಭಿಮಾನಿಗಳ ಸಹಕಾರದ ಅಗತ್ಯವಿದೆ.ವಿದ್ಯಾರ್ಥಿಗಳ ಕೆಲವು ಸಾಧನೆಗಳು
2010ರಲ್ಲಿ ಸುಕನ್ಯಾ ಶೆಟ್ಟಿ ಇನ್ಸ್ಪೈಯರ್ ಆವಾರ್ಡ್ ವಿಜ್ಞಾನ ಮಾದರಿಯಲ್ಲಿ ರಾಜ್ಯಮಟ್ಟಕ್ಕೆ, 2015-16ರಲ್ಲಿ ಉಮೇಶ ನಾಯಕ್ ಸ್ವಿಜರ್ಲ್ಯಾಂಡ್ನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿನಿಧಿ, 2015-16ರಲ್ಲಿ ಉಮೇಶ ನಾಯಕ್ ಮುಖ್ಯಮಂತ್ರಿಗಳೊಂದಿಗೆ ಸಂವಾದದಲ್ಲಿ ಭಾಗಿ, ಪ್ರಾಚ್ಯಪ್ರಜ್ಞೆ ರಸಪ್ರಶ್ನೆಯಲ್ಲಿ ಪ್ರಥಮ, ಆದಿತ್ಯ ಪ್ರಾಚ್ಯಪ್ರಜ್ಞೆ ರಾಜ್ಯಮಟ್ಟಕ್ಕೆ ಆಯ್ಕೆ, 2016-17ರಲ್ಲಿ ಆದಿತ್ಯ, ನವೀನ ರಾಜ್ಯಮಟ್ಟಕ್ಕೆ, 2016-17ರಲ್ಲಿ ಉಮೇಶ ನಾಯಕ್ ಎಸ್.ಎಸ್.ಎಲ್.ಸಿಯಲ್ಲಿ 611 ಪಡೆದು ಉಡುಪಿ ಜಿಲ್ಲೆಗೆ ಕನ್ನಡ ಮಾಧ್ಯಮದಲ್ಲಿ ನಾಲ್ಕನೇ ಸ್ಥಾನ, 2017-18ರಲ್ಲಿ ಆದಿತ್ಯ ಎಸ್.ಎಸ್.ಎಲ್.ಸಿಯಲ್ಲಿ ೬೧೨ ಅಂಕ ಪಡೆದು ಜಿಲ್ಲೆಗೆ ತೃತಿಯ, 2009-10ರಲ್ಲಿ ತ್ರಿವರ್ಣ ಕ್ರಿಕೆಟ್ ಪಂದ್ಯಾವಳಿ ರಾಜ್ಯ ಮಟ್ಟಕ್ಕೆ ಆಯ್ಕೆ, 2008-2009ರಲ್ಲಿ ವಾಲಿಬಾಲ್ ತಂಡ ರಾಜ್ಯಮಟ್ಟಕ್ಕೆ, 2010-11 ರಲ್ಲಿ ಮಹೇಂದ್ರ ಹ್ಯಾಮರ್ ತ್ರೋನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.