ಉಡುಪಿ, ಡಿ 19 (MSP): ಬ್ರಹ್ಮಾವರದ ಸೂರಾಲು ಎಂಬಲ್ಲಿ ಚಿತ್ರೀಕರಣವಾಗುತ್ತಿರುವ 'ಏರಗಾವು ಕಿರಿಕಿರಿ' ತುಳು ಸಿನಿಮಾದ ನಾಯಕ ಹಾಗೂ ನಾಯಕಿಯರು ಹೊಡೆದಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ. ಇವರಿಬ್ಬರ ಮದ್ಯೆ ಚಿತ್ರೀಕರಣದ ಮೊದಲ ದಿನದಿಂದಲೂ ’ಕಿರಿಕ್ ’ಇತ್ತು ಎನ್ನಲಾಗಿದೆ.
ಡಿ.17 ರಂದು ಚಿತ್ರೀಕರಣದ ನಡೆಯುತ್ತಿರುವಾಗ , ಸಂಜೆ ವೇಳೆಗೆ ಮತ್ತೆ ಇವರಿಬ್ಬರ ವೈಮನಸ್ಸು ಜಗಳದ ರೂಪ ಪಡೆದು, ಹೊಡೆದಾಟದವರೆಗೆ ತಲುಪಿದ್ದು, ಚಿತ್ರದ ನಾಯಕ ನಟ, ನಾಯಕಿ ನಟಿ ಮೇಲೆ ಹಲ್ಲೆ ನಡೆಸಿದ್ದಾನೆ , ಕೊನೆಗೆ ಸಹ ಕಲಾವಿದರೂ ಬಂದು ಇವರಿಬ್ಬರ ಜಗಳ ಬಿಡಿಸಿದ್ದಾರೆ.
ಮುಂಬೈ ಮೂಲದ ನಟಿ ಐಶ್ವರ್ಯ ಕೈ ಹಿಡಿದು ಎಳೆದಾಡಿದ, ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ನೈಮ್ ಆಕೆಗೆ ಥಳಿಸಿದ್ದು, ಇದರ ಪರಿಣಾಮ ಗಾಯಗೊಂಡ ನಟಿ ಬ್ರಹ್ಮಾವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಇದೇ ಚಿತ್ರದಲ್ಲಿ ಕೋಸ್ಟಲ್ ವುಡ್ ನ ಹೆಸರಾಂತ ಹಾಸ್ಯ ಕಲಾವಿದರೊಬ್ಬರು ನಟಿಸುತ್ತಿದ್ದು, ನಿರ್ಮಾಪಕರಿಗೆ ತೊಂದರೆ ಆಗದಂತೆ ಆ ಸಂದರ್ಭ ರಾಜಿ ಪಂಚಾಯ್ತಿ ನಡೆಸಿದ್ದಾರೆ ಎನ್ನಲಾಗಿದೆ. ಇವರಿಬ್ಬರ ’ಕಿರಿಕಿರಿಗೆ’ ಕಂಗೆಟ್ಟಿರುವ ನಿರ್ಮಾಪಕರು, ತಾನು ಸಿನಿಮಾಕ್ಕಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದು, ದಯವಿಟ್ಟು ಸಿನಿಮಾ ಶೂಟಿಂಗ್ ಮುಗಿಯುವವರೆಗೆ ಸುಮ್ಮನಿರಿ ಎಂದು ವಿನಂತಿಸಿದ್ದಾರೆ.
ಸಿನಿಮಾ ಶೂಟಿಂಗ್ ಮುಗಿದ ತಕ್ಷಣ ನಾಯಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಹೀರೋ ಮೇಲೆ ನಟಿ ಸಂಬಂಧಿಕರು ಪೊಲೀಸರ ಮೊರೆ ಹೋಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.