ಕಾಸರಗೋಡು, ಡಿ 19 (MSP): ಪೈವಳಿಕೆ ಬೋಳಂಗಳದಲ್ಲಿ ಕಾನೂನು ಬಾಹಿರವಾಗಿ ಕಂಬಳ ನಡೆಸಿದರೆಂಬ ಆರೋಪ ಹೊರಿಸಿ, ಮಂಜೇಶ್ವರ ಪೊಲೀಸರು 113 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ನ್ಯಾಯಾಲಯದ ಅನುಮತಿ ಪಡೆಯದೇ ಕಂಬಳ ನಡೆಸಿದ ಸಂಘಟಕ ಸಮಿತಿಯ 13 ಮಂದಿಯ ವಿರುದ್ಧ ಹಾಗೂ ಕಂಬಳಕ್ಕೆ ಪ್ರೋತ್ಸಾಹ ನೀಡಿದ 100 ಮಂದಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಪೆಟಾ ವಿರೋಧದ ನಡುವೆಯೂ ಪೈವಳಿಕೆ ಬೋಳಂಗಳದಲ್ಲಿ ಬಾರುಕೋಲು ಎತ್ತದೆ ಕೋಣಗಳಿಗೆ ಹಿಂಸೆ ನೀಡದೆ ‘ಅಣ್ಣ– ತಮ್ಮ’ ಜೋಡುಕರೆ ಕಂಬಳ ಡಿ.೧೫ ರಂದು ಶನಿವಾರ ಯಶಸ್ವಿಯಾಗಿ ನಡೆದಿತ್ತು. 100ಕ್ಕೂ ಹೆಚ್ಚು ಕಂಬಳ ಕೋಣಗಳು ಪಾಲ್ಗೊಂಡಿದ್ದವು. ಆದರೆ ಕಂಬಳ ನಡೆಸಬೇಡಿ ಎಂಬ ಪೊಲೀಸರ ಸೂಚನೆಯನ್ನು ಮೀರಿ ಶನಿವಾರ ‘ಅಣ್ಣ– ತಮ್ಮ’ ಜೋಡುಕರೆ ಕಂಬಳ ನಡೆಸಿರುವ ಸಂಘಟಕರ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಿಷೇಧ ಇರುವುದರಿಂದ ಕೇರಳದಲ್ಲಿ ಕಂಬಳ ನಡೆಸಲು ಅವಕಾಶವಿಲ್ಲ. ಈ ಸಂಬಂಧ ಪ್ರಾಣಿ ದಯಾ ಸಂಘಟನೆ ಪೇಟಾ ಸಲ್ಲಿಸಿದ್ದ ದೂರನ್ನು ಆಧರಿಸಿ, ಪೈವಳಿಕೆ ಕಂಬಳ ನಡೆಸದಂತೆ ಕಾಸರಗೋಡು ಎಸ್ಪಿ ಎ.ಶ್ರೀನಿವಾಸ್ ಸಂಘಟಕರಿಗೆ ಶುಕ್ರವಾರ ನೋಟಿಸ್ ಜಾರಿ ಮಾಡಿದ್ದರು. ಅದನ್ನು ಲೆಕ್ಕಿಸದೇ ಸಂಘಟಕರು ಕಂಬಳ ನಡೆಸಿದ್ದರು.