ಮಂಗಳೂರು, ಮಾ 11(DaijiworldNews/MS): ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿಯೊಬ್ಬರು , ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿರುವ ಯೋಗಿ ಆದಿತ್ಯನಾಥ್ಗೂ ಕರಾವಳಿ ನಗರ ಮಂಗಳೂರಿಗೂ ಅವಿನಾಭಾವ ಸಂಬಂಧವಿದೆ.
ಯೋಗಿ ಕರ್ನಾಟಕಕ್ಕೆ ಬರುತ್ತಾರೆಂದರೆ ಮಂಗಳೂರಿಗೆ ಬಂದೇ ಬರುತ್ತಾರೆ. ಇದುವರೆಗೆ ಯೋಗಿ ಆದಿತ್ಯನಾಥ್ ಆರು ಬಾರಿ ಮಂಗಳೂರಿಗೆ ಭೇಟಿ ನೀಡಿದ್ದಾರೆ. 2017ರ ಅ.3ರಂದು ಕೇರಳದಲ್ಲಿ ಜನರಕ್ಷಾ ಯಾತ್ರೆಗೆ ಆಗಮಿಸಿದ್ದ ಸಂದರ್ಭವೂ ಮಂಗಳೂರಿನ ಕದ್ರಿ ಮಠಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು.
ಹೀಗಾಗಿ ಯೋಗಿಯವರ ಭರ್ಜರಿ ಗೆಲುವಿಗೆ ಇಲ್ಲಿಯ ಕದ್ರಿಯಲ್ಲಿರುವ ಕದಳಿ ಶ್ರೀ ಯೋಗೇಶ್ವರ (ಜೋಗಿ) ಮಠದಲ್ಲಿ ಸಂಭ್ರಮ ಮನೆ ಮಾಡಿದೆ.ಯೋಗಿ ಆದಿತ್ಯನಾಥ್ ಅವರು ಅಖಿಲ ಭಾರತ ವರ್ಷಿಯ ಅವಧೂತ್ ಯೋಗಿ ಮಹಾ ಸಭಾ ಭೇಕ್ ಭಾರಹ ಪಂಥದ ಮಹಾಂತ್ ಆಗಿದ್ದು, 12 ವರ್ಷಗಳಿಗೊಮ್ಮೆ ಮಂಗಳೂರು ಜೋಗಿ ಮಠದ ಮಠಾಧಿಪತಿ (ರಾಜ) ಗಳ ಆಯ್ಕೆ ಯೋಗಿ ನೇತೃತ್ವದಲ್ಲಿ ನಡೆಯುತ್ತಿದೆ. ಭಾರಹ ಪಂಥದ ಪದಾಧಿಕಾರಿಗಳ ಸಮ್ಮುಖದಲ್ಲಿ ಕುಂಭಮೇಳದ ಸಮಯದಲ್ಲಿ ತ್ರಯಂಬಕೇಶ್ವರದಲ್ಲಿ (ನಾಸಿಕ್ ಬಳಿ) 12 ಪಂಗಡಗಳ ಶ್ರೀಗಳು ಮಂಗಳೂರು ಜೋಗಿ ಮಠದ ‘ರಾಜ’ವನ್ನು ಆಯ್ಕೆ ಮಾಡುತ್ತಾರೆ.
ಯೋಗಿಯವರು ಆಯ್ಕೆ ಮಾಡಿದ ಬೈರಾಗ್ ಪಂಥದ ಶ್ರೀ ಯೋಗಿ ನಿರ್ಮಲನಾಥ್ ಅವರು ಸದ್ಯ ಜೋಗಿ ಮಠದ ‘ರಾಜ’ನಾಗಿದ್ದಾರೆ. ಜೋಗಿ ಮಠಕ್ಕೆ 1,000ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಬೈರಾಗ್, ಕಪ್ಲಾನಿ, ನಟೇಶ್ವರಿ ಮತ್ತು ಗಂಗಾನಾಥ ಪಂಗಡದ ದಾರ್ಶನಿಕರು ಮಾತ್ರ ಮಠಾಧಿಪತಿಯಾಗಲು ಅರ್ಹರು. ಪ್ರತಿಯೊಂದು ಪಂಗಡವೂ 48 ವರ್ಷಗಳ ನಂತರ ತನ್ನ ಸರದಿಯಲ್ಲಿ ಮಠಾಧಿಪತಿಯಾಗಲು ಅವಕಾಶ ಇದೆ.
ಉತ್ತರ ಪ್ರದೇಶದ ಮಗೋರಖ್ಪುರದಿಂದ ಸುಮಾರು 2,000 ಕಿಮೀ ದೂರದಲ್ಲಿರುವ ಮಂಗಳೂರಿನ ಜೋಗಿ ಮಠಕ್ಕೆ ಯೋಗಿಯವರು ಮಹಾಂತರಾಗಿ, ಸಂಸದರಾಗಿ, ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಇಲ್ಲಿಯ ತನಕ ಆರು ಸಲ ಭೇಟಿ ನೀಡಿದ್ದಾರೆ. ಕರ್ನಾಟಕಕ್ಕೆ ಭೇಟಿ ನೀಡಿದಾಗ ಪ್ರತೀ ಸಂದರ್ಭದಲ್ಲೂ ಅವರು ಜೋಗಿ ಮಠಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ವಿಶ್ರಾಂತಿ, ವಾಸ್ತವ್ಯ ಜೋಗಿ ಮಠದಲ್ಲಿ. ಇಂದಿಗೂ ಜೋಗಿ ಮಠದ ವ್ಯವಹಾರಗಳಲ್ಲಿ ಯೋಗಿ ಮಾತಿಗೆ ಗರಿಷ್ಠ ಮನ್ನಣೆ ಇದೆ. ಜೋಗಿ ಮಠದ ಪರ್ಯಾಯ ರಾಜ ಪಟ್ಟಾಭಿಷೇಕದ ಕಾರ್ಯಕ್ರಮಗಳು ಅವರ ಮಾರ್ಗದರ್ಶನದಲ್ಲಿ ನಡೆಯುತ್ತದೆ.
ಯೋಗಿಯವರು ಗೆದ್ದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿರುವುದು ಜೋಗಿ ಮಠಕ್ಕೆ ಅತ್ಯಂತ ಸಂಭ್ರಮಮ ಕ್ಷಣ. ಶ್ರೀ ಯೋಗಿ ನಿರ್ಮಲನಾಥ್ ಸೇರಿದಂತೆ ಜೋಗಿ ಸಮುದಾಯದವರು ಯೋಗಿ ಗೆಲುವನ್ನು ಕೊಂಡಾಡಿದ್ದಾರೆ.