ಮಂಗಳೂರು, ಮಾ 11(DaijiworldNews/MS): ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಟಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು ಕಂದಾಯ ದಾಖಲೆ ಮನೆ ಬಾಗಿಲಿಗೆ - ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯನ್ನು ಇದೇ ಮಾ. 12 ರಂದು ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಸರ್ಕಾರವು ತೀರ್ಮಾನಿಸಿದೆ.
ಈ ಯೋಜನೆಯನ್ನು ಮಾ.12ರ ಬೆಳಿಗ್ಗೆ 11 ಗಂಟೆಗೆ ಮುಖ್ಯ ಮಂತ್ರಿ ಬೊಮ್ಮಾಯಿಯವರು ರಾಜ್ಯ ಮಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಾಲನೆ ನೀಡಲಿದ್ದಾರೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ. 12 ರಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಮೂಡಬಿದ್ರೆ ತಾಲೂಕು ಮೂಡಬಿದ್ರೆ ಹೋಬಳಿಯ ಪಡು ಮಾರ್ನಾಡು ಗ್ರಾಮದಲ್ಲಿ ಉದ್ಘಾಟಿಸುವರು.
ತಾಲೂಕು ಮಟ್ಟದಲ್ಲಿ ಸ್ಥಳೀಯ ವಿಧಾನ ಸಭಾ ಸದಸ್ಯರು ಅವರ ಕ್ಷೇತ್ರಕ್ಕೆ ಒಳಪಡುವ ಗ್ರಾಮಗಳಲ್ಲಿ ರೈತರಿಗೆ ದಾಖಲೆಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸುವರು.
ತಾಲೂಕು ವ್ಯಾಪ್ತಿಯಲ್ಲಿ ಆಯ್ಕೆ ಮಾಡಲಾದ ಹೋಬಳಿ ಮತ್ತು ಗ್ರಾಮದ ವಿವರ:
1.ಮಂಗಳೂರು ತಾಲೂಕು,ಗುರುಪುರ ಹೋಬಳಿ, ಕೊಳಂಬೆ ಗ್ರಾಮ.
2.ಉಳ್ಳಾಲ ತಾಲೂಕು, ಉಳ್ಳಾಲ ಹೋಬಳಿ, ಕೋಣಾಜೆ ಗ್ರಾಮ.
3.ಮುಲ್ಕಿ ತಾಲೂಕು, ಮುಲ್ಕಿ ಹೋಬಳಿ, ಪಾವಂಜೆ ಗ್ರಾಮ.
4.ಬಂಟ್ವಾಳ ತಾಲೂಕು, ಪಾಣೆ ಮಂಗಳೂರು ಹೋಬಳಿ, ಅಮ್ಮುಂಜೆ ಗ್ರಾಮ.
5.ಪುತ್ತೂರು ತಾಲೂಕು, ಪುತ್ತೂರು ಹೋಬಳಿ, ಆರ್ಯಪು ಗ್ರಾಮ.
6.ಕಡಬ ತಾಲೂಕು, ಕಡಬ ಹೋಬಳಿ, 102 ನೆಕ್ಕಿಲಾಡಿ ಗ್ರಾಮ.
7.ಬೆಳ್ತಂಗಡಿ ತಾಲೂಕು, ವೇಣೂರು ಹೋಬಳಿ, ಕುದ್ಯಾಡಿ ಗ್ರಾಮ.
8.ಸುಳ್ಯ ತಾಲೂಕು, ಸುಳ್ಯ ಕಸ್ಟಾ ಹೋಬಳಿ ಅರಂತೋಡು ಗ್ರಾಮ
ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.