ಕಾರ್ಕಳ, ಮಾ. 10 (DaijiworldNews/SM): ಇಲ್ಲಿನ ಜೋಡುರಸ್ತೆಯ ಪ್ರೈಮ್ ಮಹಲ್ನಲ್ಲಿ ಪೂರ್ಣಿಮಾ ಲೈಫ್ ಸ್ಟೈಲ್ ಮಳಿಗೆ ಲೋಕಾರ್ಪಣೆಗೊಂಡಿದೆ. ಸಚಿವ ಸುನೀಲ್ ಕುಮಾರ್ ಮಳಿಗೆಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವ ಸುನಿಲ್ ಕುಮಾರ್, ಪೂರ್ಣಿಮಾ ಸಮೂಹ ಸಂಸ್ಥೆಗೆ 72 ವರ್ಷಗಳ ಇತಿಹಾಸವಿದ್ದು, ಗ್ರಾಹಕರಿಗೆ ನೀಡಿದ ಸೇವೆಯ ಸತ್ಕಾರ್ಯದಿಂದ ಸಾಧನೆಗೈಯಲು ಸಾಧ್ಯವಾಗಿದೆ. ಆ ಮೂಲಕ ಐದನೇ ಶಾಖೆ ಲೋಕಾರ್ಪಣೆಗೊಂಡಿದೆ. ಅಮೃತ ಮಹೋತ್ಸವ ಆಚರಿಸುವ ಸಂದರ್ಭ ಕಾರ್ಕಳದ ಜತೆಗೆ ಸುತ್ತಮುತ್ತಲ ಊರುಗಳಲ್ಲೂ ಈ ಸಂಸ್ಥೆಯ ವಿಸ್ತೃತ ಶಾಖೆಗಳು ತೆರೆದುಕೊಳ್ಳಲಿದೆ. ಸಂಸ್ಥೆಯ ಸಂಸ್ಥಾಪಕರಾದ ಪಾಂಡುರಂಗ ಪ್ರಭು ಅವರು ಸಾಮಾಜಿಕ ಚಟುವಟಿಕೆಗಳ ಜತೆ ರಾಷ್ಟ್ರೀಯ ಚಟುವಟಿಕೆಯಲ್ಲೂ ಭಾಗಿಯಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮಾತನಾಡಿ, ೧೯೬೬ರಲ್ಲಿ ಧರ್ಮಸ್ಥಳದ ಬಾಹುಬಲಿ ಕಾರ್ಕಳದ ಮಂಗಳಪಾದೆಯಲ್ಲಿ ಕೆತ್ತಲ್ಪಟ್ಟಿತ್ತು. ಆ ಸಂದರ್ಭ ಡಾ.ಹೆಗ್ಗಡೆ ಅವರು ಕಾರ್ಕಳಕ್ಕಾಗಮಿಸುವ ವೇಳೆ ಪಾಂಡುರಂಗ ಪ್ರಭು ಅವರ ಪರಿಚಯವಾಗಿತ್ತು. ಅಂದಿನಿಂದ ಇಂದಿನವರೆಗೆ ಈ ಕುಟುಂಬದ ಜತೆ ನಮಗೆ ಅನ್ಯೋನ್ಯತೆಯಿದೆ ಎಂದರು. ಪ್ರಸ್ತುತ ತಾಂತ್ರಿಕ ಯುಗದಲ್ಲಿ ಮ್ಯಾನೇಜ್ಮೆಂಟ್ ಕಷ್ಟಕರವಲ್ಲ. ಆದರೆ ಗ್ರಾಹಕರಿಗೆ ಸಂತೃಪ್ತಿ ಸೇವೆ ನೀಡುವುದು ನೀಡುವುದು ಇಂದಿನ ಅವಶ್ಯಕತೆಯಾಗಿದೆ. ಪ್ರಸ್ತುತ ಇಲ್ಲಿ ಆರಂಭಗೊಂಡ ಪೂರ್ಣಿಮಾ ಸಂಸ್ಥೆಯ ವಿಸ್ತೃತ ಶಾಖೆಯಿಂದಾಗಿ ಜೋಡುರಸ್ತೆಯು ಪೂರ್ಣಿಮಾ ಸಮೂಹ ಸಂಸ್ಥೆಯ ಮುಕುಟವಾಗಲಿ ಎಂದು ಹಾರೈಸಿದರು. ಚಲನಚಿತ್ರ ನಟ ಅರವಿಂದ ಬೋಳಾರ್ ಮಾತನಾಡಿ, ಪೂರ್ಣಿಮಾ ಸಂಸ್ಥೆಯ ಇತಿಹಾಸ ಬಾರೀ ವರ್ಷಗಳದ್ದಾಗಿದೆ. ಅಷ್ಟೊಂದು ವರ್ಷಗಳಿಂದ ಈ ಸಂಸ್ಥೆಯ ನಡೆದುಕೊಂಡು ಬಂದಲ್ಲಿ ಆ ಕುಟುಂಬಿಕರ ಶ್ರಮವನ್ನು ಶ್ಲಾಘಿಸಲೇ ಬೇಕು. ಇನ್ನಷ್ಟು ವರ್ಷಗಳ ಕಾಲ ಗ್ರಾಹಕರಿಗೆ ಸಂತೃಪ್ತ ಸೇವೆ ಈ ಸಂಸ್ಥೆಯಿಂದ ಸಿಗಲಿ ಎಂದು ಹಾರೈಸಿದರು.