ಉಡುಪಿ, ಮಾ 10 (DaijiworldNews/DB): ಕಾಂಗ್ರೆಸ್ ಇನ್ನು ಮುಂದೆ ಭೂತಕಾಲದ ಪಾರ್ಟಿ. ವರ್ತಮಾನದಲ್ಲಿ ಇಲ್ಲ. ಭವಿಷ್ಯದಲ್ಲೂ ಕಾಂಗ್ರೆಸ್ ಇರುವುದಿಲ್ಲ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಪಂಚರಾಜ್ಯ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲೂ ಧೂಳಿಪಟವಾಗಿದೆ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದು, ಕೇವಲ ಎರಡಂಕೆಯನ್ನು ದಾಟಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂದರು.
ಅಭಿವೃದ್ಧಿ ,ಹಿಂದುತ್ವ ,ದಕ್ಷ ಆಡಳಿತಕ್ಕೆ ಯುಪಿಯಲ್ಲಿ ಜಯ ಸಿಕ್ಕಿದೆ. ಯೋಗಿ ದಕ್ಷ ಆಡಳಿತ, ಮೋದಿ ಜನಪ್ರಿಯತೆ ಮತ್ತೆ ಯಶಸ್ವಿಯಾಗಿದೆ. ನಮ್ಮೆಲ್ಲಾ ಕಾರ್ಯಕರ್ತರಿಗೆ ಫಲಿತಾಂಶ ಉತ್ಸಾಹ ಕೊಟ್ಟಿದೆ. ಇದೇ ಉತ್ಸಾಹದಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದ ಅವರು, ಇದಕ್ಕೆ ಬೇಕಾದ ಎಲ್ಲಾ ತಂತ್ರಗಾರಿಕೆ ಮಾಡುತ್ತೇವೆ ಎಂದು ತಿಳಿಸಿದರು.
ಉತ್ತರಾಖಂಡ, ಗೋವಾ, ಮಣಿಪುರದಲ್ಲಿ ಪಕ್ಷ ಮರು ಆಯ್ಕೆಗೊಂಡಿದೆ. ಉತ್ತರಾಖಂಡದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ ಎನ್ನಲಾಗುತ್ತಿತ್ತು. ಮೂವರು ಸಿಎಂ ಬದಲಾವಣೆಯಿಂದ ವಿರೋಧಿ ಅಲೆ ಉಂಟಾಗಿದೆ ಎನ್ನುತ್ತಿದ್ದರು. ಎಲ್ಲವನ್ನು ಮೀರಿ ಜನ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಸುನಿಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಪಂಜಾಬಿನಲ್ಲಿ ನಮಗೆ ಸುಧಾರಣೆಗೆ ಅವಕಾಶವಿದೆ. ಪಂಜಾಬ್ ನಲ್ಲಿ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಜನರ ವಿಶ್ವಾಸ ಗಳಿಸಲಿದೆ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣಕ್ಕೆ ಫಲಿತಾಂಶ ದಿಕ್ಸೂಚಿಯಾಗಿದೆ. ರಾಹುಲ್ ಗಾಂಧಿ ನಾಯಕತ್ವ ಒಪ್ಪಲು ಸಾಧ್ಯವಿಲ್ಲ ಎಂದು ಜನತೆ ತೋರಿಸಿಕೊಟ್ಟಿದ್ದಾರೆ ಎಂದವರು ಇದೇ ವೇಳೆ ತಿಳಿಸಿದರು.