ಕರಾವಳಿ, ಡಿ 18(SM): ಕೃಷಿಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲೆಯ ಕೃಷಿಕರು ಇಂದು ಪ್ರತಿಭಟನೆ ನಡೆಸಿದ್ದಾರೆ. ಉಡುಪಿ ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕೃಷಿಕರು ಪ್ರತಿಭಟನೆಯನ್ನು ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ರೈತರಿಗೆ ಬೆಂಬಲ ಬೆಲೆ ಸರಕಾರದಿಂದ ಸಿಗುತ್ತಿಲ್ಲ. ಕಾಡು ಪ್ರಾಣಿಗಳ ಉಪಟಳ ಹಾಗೂ ಅವುಗಳಿಂದ ಆದ ನಷ್ಟಕ್ಕೆ ಪರಿಹಾರ ಕೂಡಾ ಸರಕಾರ ನೀಡುತ್ತಿಲ್ಲ. ಜಿಲ್ಲೆಯ ಹಲವಾರು ರೈತರು ಸಾಲ ಭಾದೆಯಿಂದ ಬಳಲುತ್ತಿದ್ದು ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಜಿಲ್ಲೆಯ ರೈತರು ಹಲವಾರು ಸಂಕಷ್ಟಗಳಿಂದ ಬಳಲುತ್ತಿದ್ದು ಸರಕಾರ ಹಾಗೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ‘ಡಿ’ ದರ್ಜೆಯ ನೌಕರರ ವೇತನ ನೀಡಬೇಕು ಇಲ್ಲವೇ ಕಾಡು ಪ್ರಾಣಿಗಳ ಉಪಟಳದಿಂದ ರೈತರನ್ನು ಸರಕಾರ ರಕ್ಷಿಸುವ ಕೆಲಸ ಮಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಪುತ್ತೂರಿನಲ್ಲೂ ಧರಣಿ:
ಇನ್ನು ರಾಜ್ಯ ಹಾಗೂ ಕೇಂದ್ರ ಸರಕಾರದ ರೈತ ವಿರೋಧಿ ನೀತಿ, ರಾಜ್ಯ ಸರಕಾರದ ಸಾಲಮನ್ನಾ ನೀತಿ ವಿರೋಧಿಸಿ ರೈತಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕೂಡ ಪ್ರತಿಭಟನೆ ನಡೆಸಲಾಯಿತು. ಪುತ್ತೂರು ಬಸ್ ನಿಲ್ದಾಣದಿಂದ ಮೆರವಣಿಗೆಯ ಮೂಲಕ ಆಗಮಿಸಿದ ರೈತಸಂಘದ ಪ್ರತಿಭಟನಾಕಾರರು ಪುತ್ತೂರು ಮಿನಿ ವಿಧಾನಸೌಧದ ಮುಂದೆ ಸೇರಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೆಚ್.ಆರ್. ಬಸವರಾಜಪ್ಪ, ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರೈತರ ಸಾಲಮನ್ನಾವನ್ನೇನೋ ಘೋಷಿಸಿದೆ. ಆದರೆ ಇದರ ಪ್ರಯೋಜನವನ್ನು ಪಡೆಯುವಲ್ಲಿ ಕೃಷಿಕರು ವಿಫಲರಾಗಿದ್ದಾರೆ. ಸಾಲಮನ್ನಾ ಪಡೆಯುವುದಕ್ಕೋಸ್ಕರ ನೂರಾರು ನಿಬಂಧನೆಗಳನ್ನು ಹಾಕುವ ಮೂಲಕ ರೈತನಿಗೆ ಸಾಲಮನ್ನಾ ಯೋಜನೆ ಸಿಗದಂತೆ ಮಾಡುವ ತಂತ್ರವನ್ನೂ ಮಾಡಲಾಗಿದೆ ಎಂದು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಕೃಷಿಕರು ಕೊಳೆರೋಗದಿಂದ ಭಾರೀ ನಷ್ಟ ಅನುಭವಿಸಿದರೂ, ಈ ಕೃಷಿಕರಿಗೆ ಪರಿಹಾರವನ್ನು ವಿತರಿಸಲು ಸರಕಾರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.