ಬೆಳ್ತಂಗಡಿ, ಮಾ 09 (DaijiworldNews/DB): ಬೆಳ್ತಂಗಡಿಯ ನೆರಿಯಾ ಗ್ರಾಮದ ಕುಲೆನಾಡಿ ಚಂದ್ರಾವತಿ ಎಂಬವರ ಮನೆಯಿಂದ 65,000 ರೂ. ನಗದು ಮತ್ತು ಸುಮಾರು 1,75,000 ರೂ. ಮೌಲ್ಯದ ಚಿನ್ನಾಭರಣ ಕಳವಾದ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಾವತಿ ಅವರು-2021ರ ನ. 24ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುಂಪಿನಿಂದ 2,47,000 ರೂ. ಸಾಲ ಪಡೆದಿದ್ದರು. ಆ ಪೈಕಿ 65,000 ರೂ.ಗಳನ್ನು ತಮ್ಮ ಮನೆಯ ಮಲಗುವ ಕೊಠಡಿಯಲ್ಲಿರುವ ಬೀರುವಿನಲ್ಲಿ ಇಟ್ಟಿದ್ದರು. ಅಲ್ಲದೆ, 2021ರ ಸೆ. 6ರಂದು ಬೀರುವಿನಲ್ಲಿಆಭರಣ ಇಡುವ ಪೆಟ್ಟಿಗೆಯಲ್ಲಿ 24 ಗ್ರಾಂ ತೂಕದ ಲಕ್ಷ್ಮೀ ದೇವರ ಪದಕ ಇರುವ ಒಂದು ಚಿನ್ನದ ನೆಕ್ಲೇಸ್ ಹಾಗೂ ಇನ್ನೊಂದು ಡಬ್ಬದಲ್ಲಿ 20 ಗ್ರಾಂ ತೂಕದ ಬಾಣದ ಗುರುತಿಗೆ ಇಂಗ್ಲಿಷಿನಲ್ಲಿ ’ಎಸ್’ ಎಂಬುದಾಗಿ ಬರೆದಿರುವ ಚಿನ್ನದ ಪದಕದ ಒಂದು ಚಿನ್ನದ ಸರ ಇಟ್ಟಿದ್ದರು.
ಹಣದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಮಾರ್ಚ್ 8ರಂದು ಬೆಳಗ್ಗೆ 9 ಗಂಟೆ ವೇಳೆಗೆ ಬೀರುವಿನಲ್ಲಿ ಇಟ್ಟಿದ್ದ ಹಣವನ್ನು ತೆಗೆಯಲು ಹೋದಾಗ ಹಣ ನಾಪತ್ತೆಯಾಗಿತ್ತು. ಸಂಶಯಗೊಂಡು ಆಭರಣ ಇಟ್ಟಿದ್ದ ಡಬ್ಬಿಯನ್ನು ನೋಡಿದಾಗ ಚಿನ್ನದ ನೆಕ್ಲೆಸ್ ಹಾಗೂ ಚಿನ್ನದ ಸರ ಕೂಡಾ ಇರಲಿಲ್ಲ. ಹೀಗಾಗಿ 2021ರ ಸೆ. 6ರ ರಾತ್ರಿ 10 ಗಂಟೆಯಿಂದ ಮಾ. 8ರ ಬೆಳಗ್ಗೆ 9 ಗಂಟೆಯ ಮಧ್ಯದ ಅವಧಿಯಲ್ಲಿ ನಗದು ಮತ್ತು ಚಿನ್ನಾಭರಣ ಕಳವಾಗಿರಬೇಕೆಂದು ಅಂದಾಜಿಸಲಾಗಿದೆ.
ಕಳವಾದ ಚಿನ್ನದ ಅಂದಾಜು ಮೌಲ್ಯ 175000 ರೂ. ಆಗಿದ್ದು, ನಗದು ಮತ್ತು ಆಭರಣ ಸೇರಿ ಒಟ್ಟು 2,40,000 ರೂ.ಗಳನ್ನು ಪಿರ್ಯಾದಿದಾರರು ಕಳೆದುಕೊಂಡಿದ್ದಾರೆ. ಪಿರ್ಯಾದುದಾರರ ಸಂಬಂಧಿಯೋರ್ವ ಮನೆಗೆ ಆಗಾಗ ಬರುತ್ತಿದ್ದು ಆತ ಕಳವು ಮಾಡಿರುವ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.