ಮಂಗಳೂರು, ಮಾ 09 (DaijiworldNews/DB): ನಗರದಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಯ ಪರಿಣಾಮ ಬುಧವಾರ ಬೆಳಗ್ಗೆ ರೊಝಾರಿಯೋ ರಸ್ತೆಯಲ್ಲಿನಿಂತಿದ್ದ ಲಾರಿ ಮೇಲೆ ಭಾರೀ ಗಾತ್ರದ ಮರ ಉರುಳಿ ಬಿದ್ದಿದ್ದು, ಲಾರಿ ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ನಗರದಲ್ಲಿ ತಡರಾತ್ರಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿತ್ತು. ಮಳೆಯ ಪರಿಣಾಮ ರೊಝಾರಿಯೋ ರಸ್ತೆಯಲ್ಲಿದ್ದ ಬಿಎಸೆನ್ನೆಲ್ ಕಂಪೌಂಡ್ ಆವರಣದಿಂದ ಕಂಪೌಂಡ್ ವಾಲ್ ಸಮೇತ ಭಾರೀ ಗಾತ್ರದ ಮರ ಬುಡ ಸಮೇತ ಉರುಳಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿ ಮೇಲೆ ಬಿದ್ದಿದೆ. ಲಾರಿಯಲ್ಲಿದ್ದ ಚಾಲಕ ಪುರುಷೋತ್ತಮ ಅವರು ಮರ ಬೀಳುತ್ತಿರುವ ಸದ್ದು ಕೇಳಿ ತತ್ ಕ್ಷಣ ಎಚ್ಚೆತ್ತುಕೊಂಡು ಲಾರಿಯಿಂದ ರಸ್ತೆಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿಗೆ ಭಾರೀ ಹಾನಿಯಾಗಿದೆ.
ಕಾಲೇಜಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಮರ ಬೀಳುವ ಸಂದರ್ಭದಲ್ಲಿ ರಸ್ತೆ ಖಾಲಿ ಇದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಪಾಂಡೇಶ್ವರ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಪಾಂಡೇಶ್ವರ ಪೊಲೀಸರು ಸಂಚಾರ ನಿಯಂತ್ರಣದಲ್ಲಿ ಸಹಕರಿಸುತ್ತಿದ್ದಾರೆ. ಮರ ತೆರವು ಕಾರ್ಯಾಚಣೆ ಸುಲಭವಾಗಲು ಈ ಭಾಗದಲ್ಲಿ ಮೆಸ್ಕಾಂ ಸಿಬಂದಿ ವಿದ್ಯುತ್ ಕಡಿತಗೊಳಿಸಿದ್ದಾರೆ.