ಮಂಗಳೂರು, ಮಾ. 08 (DaijiworldNews/SM): ರಥಬೀದಿ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದು, ಪ್ರಕರಣ ಸಂಬಂಧ ಇತ್ತಂಡಗಳ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೂರು ಪ್ರಕರಣಗಳು ಕೂಡ ತನಿಖೆಯಲ್ಲಿದೆ. ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬಂದರು ಠಾಣೆಯಲ್ಲಿ 2, ಸೆನ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. ತನಿಖೆ ಸಂಬಂಧ ಕೆಲವರಿಗೆ ನೋಟೀಸ್ ನೀಡಲಾಗಿದೆ. ಪ್ರಾಂಶುಪಾಲರು ಕೂಡಾ ಪ್ರತ್ಯೇಕ ದೂರು ನೀಡಿದ್ದರು. ತರಗತಿಗೆ ಅಡ್ಡಿಪಡಿಸಿದ್ದಾಗಿ ಹಿಬಾ ಶೇಖ್ ವಿರುದ್ಧ ಪ್ರಾಂಶುಪಾಲರು ದೂರು ನೀಡಿದ್ದರು. ಪ್ರಾಂಶುಪಾಲರ ದೂರಿನನ್ವಯ FIR ದಾಖಲಿಸಲು ಬರುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗಷ್ಟೇ ಅವರು ದೂರು ನೀಡಬಹುದು ಎಂದಿದ್ದಾರೆ.
ಇನ್ನು ಹಿಬಾ ಶೇಖ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಖುದ್ದು ನಾನೇ ಠಾಣೆಗೆ ತೆರಳಿ ದೂರುದಾರರ ದೂರು ಆಲಿಸಿದ್ದೇನೆ. ಹಿಜಾಬ್ ವಿವಾದ ಶಿಕ್ಷಣ ಸಂಸ್ಥೆ ಮತ್ತು ಸಂಬಂಧಪಟ್ಟ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಪೊಲೀಸ್ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ಕಾನೂನು ಅಭಿಪ್ರಾಯ ಪಡೆದು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಗಳ ಪ್ರಾಣ ರಕ್ಷಣೆ ಪೊಲೀಸರ ಜವಾಬ್ದಾರಿಯಾಗಿದ್ದು, ಬೆದರಿಕೆ ಬಂದಿರೋ ವಿದ್ಯಾರ್ಥಿನಿಯರು ಮಾಹಿತಿ ನೀಡಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.