ಮಂಗಳೂರು, ಮಾ. 08 (DaijiworldNews/SM): ಯುದ್ಧಗ್ರಸ್ತ ಉಕ್ರೇನ್ ನ ಕೀವ್, ಖಾರ್ಕಿವ್ ನಗರದಿಂದ ಕರಾವಳಿಗರು ಮರಳುತ್ತಿದ್ದಾರೆ. ತವರಿಗೆ ಮರಳಿದವರು ಬಿಚ್ಚಿಡುವ ಇಂಚಿಂಚು ಮಾಹಿತಿ ಕೇಳುವಾಗಲೂ ಮೈ ಜುಂ ಎನ್ನುವ ಅನುಭವ. ಅರೆಕ್ಷಣ ಬೆಚ್ಚಿ ಬೀಳಿಸುವ ಅನುಭವ.
ಈಗಾಗಲೇ ಕರಾವಳಿಗೆ ಆಗಮಿಸಿದ ಕ್ಲೇಟನ್, ಅನೈನಾ, ಅರ್ಶದ್, ಲಕ್ಷಿತಾ ಅವರು ದೈಜಿವರ್ಲ್ಡ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿದ್ದು, ತಮ್ಮ ಅನುಭವಗಳನ್ನು ಹಾಗೂ ಕಣ್ಣೆದುರೇ ಕಂಡ ಅನೇಕ ಭೀಕರ ದೃಶ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲೂ ತ್ರಿವರ್ಣ ಧ್ವಜಕ್ಕೆ ಎಷ್ಟು ಗೌರವವಿದೆ ಎಂಬುವುದು ರಣರಂಗವಾಗಿದ್ದ ಉಕ್ರೇನ್ ನಿಂದ ನಮಗೆ ತಿಳಿಯಿತು.
ಧ್ವಜ ಹಿಡಿದು ಕಾಲ್ನಡಿಗೆಯಲ್ಲಿದ್ದ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಗೌರವ ಸಿಕ್ಕಿತು. ಆ ಮೂಲಕ ನಮಗೆ ಯಾವುದೇ ತೊಂದರೆಯಾಗದಂತೆ ಮರಳಲು ಸಾಧ್ಯವಾಯಿತು. ಇನ್ನು ಯುದ್ಧ ನೆಲದಲ್ಲಿ ಭಾರತ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಅನ್ನೋದು ಸಂಪೂರ್ಣ ತಪ್ಪು. ಸರಕಾರ ನೆರವು ನೀಡಿದ ಕಾರಣದಿಂದಾಗಿ ನಮಗೆ ಸುರಕ್ಷಿತವಾಗಿ ಮರಳಲು ಸಾಧ್ಯವಾಯಿತು ಎಂದು ಕರಾವಳಿ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಹೇಳುವ ವಿಚಾರ ಕೇಳುವ ಸಂದರ್ಭದಲ್ಲೇ ಒಂದು ಕ್ಷಣ ಕತ್ತಲು ಆವರಿಸಿದಂತೆ ಅನುಭವವಾಗುತ್ತದೆ. ಆದರೆ, ಕಣ್ಣೆದುರಲ್ಲೇ ಬಾಂಬಿಂಗ್ ನಡೆಯುವ ಸಂದರ್ಭದಲ್ಲಿ ಖಂಡಿತವಾಗಿಯೂ ಹೇಳಲು ಅಸಾಧ್ಯವಾಗುವ ಪರಿಸ್ಥಿತಿ.
ಬಾಂಬಿಂಗ್ ನಡುವೆಯೂ ವಿದ್ಯಾರ್ಥಿಗಳು ಭಾರತದ ರಾಷ್ಟ್ರ ಧ್ವಜ ಹಿಡಿದು ನಡೆದುಕೊಂಡೇ ಬಂದರು. ಮತ್ತೊಂದೆಡೆ ರಾಜಧಾನಿ ಕೀವ್ ನಲ್ಲಿದ್ದ ವಿದ್ಯಾರ್ಥಿಗಳಿವೆ ಪಾಸ್ ಪೋರ್ಟ್ ವಾಪಾಸ್ ನೀಡಲು ಏಜೆಂಟ್ ಗಳು ಹಿಂದೇಟು ಹಾಕುತ್ತಿದ್ದರು. ಎಲ್ಲಾ ಸಂಕಷ್ಟಗಳ ನಡುವೆಯೇ ವಿದ್ಯಾರ್ಥಿಗಳು ತವರಿಗೆ ಮರಳಿದ್ದು, ಅವರು ಹೇಳುವ ಇಂಚಿಂಚು ಮಾಹಿತಿ ಕೇಳಿದಾಗಲೂ ರೋಮಾಂಚನವಾಗುತ್ತದೆ.