ಮಂಗಳೂರು, ಮಾ 06 (DaijiworldNews/DB): ಬಾಲ್ಯ ವಿವಾಹ ನಿಷೇಧ ಹಾಗೂ ಅದರ ಕಾಯ್ದೆಯ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಲು ಎಲ್ಇಡಿ ವಾಹನದ ಮೂಲಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ಅವರು ಮಾ. 6ರ ಭಾನುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ನಿಷೇಧ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಾಲ್ಯ ವಿವಾಹದ ದುಷ್ಪರಿಣಾಮಗಳು, ಅದಕ್ಕಾಗಿ ರೂಪಿಸಲಾದ ಕಾಯ್ದೆಗಳ ಬಗ್ಗೆ ಎಲ್ಇಡಿ ವಾಹನ್ ಮೂಲಕ ಹಮ್ಮಿಕೊಳ್ಳಲಾದ ಅಭಿಯಾನದ ಮೂಲಕ ಅರಿವು ಮೂಡಿಸಲಾಗುವುದು. ಅದಕ್ಕಾಗಿ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಬಾಲ್ಯ ವಿವಾಹದ ದುಷ್ಪರಿಣಾಮ ನಾನಾ ರೀತಿಯಲ್ಲಿ ಬೀರುತ್ತದೆ, ಅದಕ್ಕೆ ಸರ್ಕಾರವು ಈ ಕಾಯ್ದೆಯನ್ನು ಜಾರಿ ಮಾಡಿದೆ, 2021ರಲ್ಲಿ ಲೋಕಸಭೆಯಲ್ಲಿ ಈ ಕಾಯ್ದೆಯನ್ನು ಮತ್ತಷ್ಟು ಗಟ್ಟಿ ಮಾಡಲಾಗಿದೆ. ಮಕ್ಕಳ ರಕ್ಷಣೆಗಾಗಿ ಈ ಕಾಯ್ದೆಯ ಜಾರಿ ತೀರಾ ಅಗತ್ಯ ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಸಾಮಾಜಿಕ ಮಾಧ್ಯಮಗಳು ಉತ್ತುಂಗ ಸ್ಥಿತಿಯಲ್ಲಿರುವ ಇಂತಹ ಕಾಲಘಟ್ಟದಲ್ಲೂ ಬಾಲ್ಯ ಕಸಿಯುವ ಬಾಲ್ಯವಿವಾಹ ನಡೆಯುತ್ತಿರುವುದು ಕಳವಳಕಾರಿ.
ಭೂಮಿಯನ್ನು ಹೊರತು ಪಡಿಸಿದರೆ ಹೆಣ್ಣಿಗೆ ಮಾತ್ರ ಪುನರ್ ಸೃಷ್ಟಿ ಸಾಧ್ಯ. ಅಂತಹ ಹೆಣ್ಣಿನ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.
ಬಾಲ್ಯ ವಿವಾಹ ನಡೆಯದಂತೆ ಜಾಗೃತಿ ವಹಿಸುವುದು ಸರ್ಕಾರದ ಪ್ರತಿಯೊಂದು ಇಲಾಖೆ ಹಾಗೂ ಪ್ರತಿಯೊಬ್ಬ ಸರ್ಕಾರಿ ನೌಕರರ, ಸಾಮಾಜಿಕ ಕಾರ್ಯಕರ್ತರ ಹಾಗೂ ಸಮಾಜದ ಪ್ರತಿ ನಾಗರೀಕರ ಕರ್ತವ್ಯ.
ಬಾಲ್ಯ ವಿವಾಹಕ್ಕೆ ಸಹಾಯ ಮಾಡುವುದು ಅಪರಾಧ, ಅದರ ಪ್ರಯತ್ನವೂ ಅಪರಾಧ. ಅದಕ್ಕೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂಬ ಮಾಹಿತಿ ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲು 9 ದಿನಗಳ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಬಾಲ್ಯ ವಿವಾಹದ ನಿಷೇಧ ಕಾಯ್ದೆ ಜಾರಿಗೊಂಡು ಹಲವು ವರ್ಷಗಳಾಗಿವೆ. ಅದರ ಪರಿಣಾಮಕಾರಿ ಅನುಷ್ಠಾನ ನಡೆಯಬೇಕು. ಕಾಯ್ದೆಯೊಂದಿಗೆ ಜಾಗೃತಿಯೂ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಬಾಲ್ಯವಿವಾಹ ಮರುಕಳಿಸುವಲ್ಲಿ ಜಾಗೃತಿಯ ಕೊರತೆ ಎದ್ದುಕಾಣುತ್ತದೆ. ಕಳೆದ ವರ್ಷ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಬಾಲ್ಯವಿವಾಹ ಪಿಡುಗಿಗೆ ಶಿಕ್ಷಣವೇ ಮದ್ದುಎಂದವರು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯಮಂಜುನಾಥ್ ಭಂಡಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಾಪಬೋವಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಯವರು ಪ್ರತಿಜ್ಞಾ ವಿಧಿ ಬೋಧಿಸಿದರು. ಬಾಲ್ಯವಿವಾಹ ನಿಷೇಧ ಸಹಿ ಸಂಗ್ರಹ ಅಭಿಯಾನಕ್ಕೆ ನೆರೆದ ಗಣ್ಯರು ಸಹಿ ಮಾಡಿದರು.
ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಾಥಾದ ಮೂಲಕ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಡಿಯೋ ಆನ್ವಿಲ್ಸ್ ವಾಹನದ ಮುಖಾಂತರ ಬಾಲ್ಯವಿವಾಹ ನಿಷೇಧ ಅಭಿಯಾನ ಮೂಡಿಸಲಾಗುತ್ತಿದೆ. ಈ ಅಭಿಯಾನವು ಜಿಲ್ಲೆಯ 19 ಹೋಬಳಿಗಳಲ್ಲಿ 45 ಹಳ್ಳಿಗಳಲ್ಲಿ 9 ದಿನಗಳ ಕಾಲ ಸಂಚರಿಸಿ ಅರಿವು ಮೂಡಿಸಲಿದೆ.