ಉಡುಪಿ, ಮಾ. 04 (DaijiworldNews/SM): ಕರಾವಳಿ ಭಾಗದಲ್ಲಿ ಅಭಿವೃದ್ಧಿಗೆ ಒತ್ತು ಕೊಟ್ಟರೆ ಯಾವುದೇ ರಾಜಕೀಯ ಲಾಭ ಸಿಗುವುದಿಲ್ಲ. ಭಾವನಾತ್ಮಕ ವಿಚಾರಗಳೇ ಮುಂದಿನ ಚುನಾವಣೆಗೆ ಬಿಜೆಪಿ ಶ್ರೀರಕ್ಷೆ ಎಂದು ಗೊತ್ತಿದ್ದು ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ಅನುದಾನ ಕೊಟ್ಟಿಲ್ಲ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ವ್ಯಂಗ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬಜೆಟ್ ನಲ್ಲಿ ಉಡುಪಿಯನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಲಾಗಿದೆ. ಆರ್ಥಿಕ ಪರಿಸ್ಥಿತಿಯನ್ನು ಉತ್ತೇಜನ ಗೊಳಿಸುವ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಬಜೆಟ್ ಗಾತ್ರ ಶೇಕಡ ಹೆಚ್ಚಾಗಿದೆ. ಎಷ್ಟು ಸಾಲ ಪಡೆದು ಬಜೆಟ್ ಮಂಡಿಸಬಹುದೋ ಅದೆಲ್ಲವನ್ನು ಬಸವರಾಜ ಬೊಮ್ಮಾಯಿ ಬಳಸಿಕೊಂಡಿದ್ದಾರೆ. ಹಿಂದಿನ ಸರಕಾರವು ಈ ಪ್ರಯೋಜನ ಬಳಸಿಕೊಂಡಿದೆ ಆದರೆ ಬೊಮ್ಮಾಯಿಯಷ್ಟು ಅಲ್ಲ.
ರಾಜ್ಯಸರಕಾರ 26 ಸಾವಿರ ಕೋಟಿ ರೂಪಾಯಿ ಬಡ್ಡಿ ಕಟ್ಟುತ್ತದೆ. ಕೇಂದ್ರ ಸರ್ಕಾರದಿಂದ ಬರುವ ಯೋಜನೆ ಹಣವನ್ನು ಇಟ್ಟುಕೊಂಡು ಬಜೆಟ್ ಗಾತ್ರವನ್ನು ಹಿಗ್ಗಿಸಲಾಗಿದೆ. ಕೇಂದ್ರದಿಂದ ನಮಗೆ ಸಹಜವಾಗಿ ಬರಬೇಕಾದ ನಮ್ಮ ಹಕ್ಕು ಜಿಎಸ್ಟಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ. ಎಲ್ಲಾ ಇಲಾಖೆಗಳಿಗೆ ಹಣವನ್ನು ಹಂಚಿಕೆ ಮಾಡಲಾಗಿದೆ. ಹೊಸ ಯೋಜನೆ ಇಲ್ಲ ಎಂದರು.
ನಾರಾಯಣ ಗುರು ನಿಗಮ ಆಗಬೇಕು ಎಂಬ ಬೇಡಿಕೆ ಇತ್ತು. ನಿಗಮ ಮಾಡಿಯೇ ಮಾಡುತ್ತೇವೆ ಎಂಬ ಅಭಿಪ್ರಾಯಗಳು ಬಿಜೆಪಿ ಕಡೆಯಿಂದ ಕೇಳಿಬರುತ್ತಿತ್ತು. ನಿಗಮದ ಬೇಡಿಕೆ ಇರುವಾಗ ನಾಲ್ಕು ವಸತಿ ಶಾಲೆಗಳು ಮಾತ್ರ ಸಿಕ್ಕಿದೆ. ಸಿದ್ದರಾಮಯ್ಯ ಸರಕಾರ ಅಲ್ಪಸಂಖ್ಯಾತರಿಗೆ 100 ಕೋಟಿ ರೂಪಾಯಿ ಕೊಟ್ಟಿದ್ದರು. ಬಿಜೆಪಿ ಎಲ್ಲಾ ಅನುದಾನವನ್ನು ಕಡಿತ ಮಾಡಿದೆ. 5 ಶಾಸಕರು ಇಬ್ಬರು ಸಚಿವರು ಒಬ್ಬರು ಕೇಂದ್ರದ ಸಚಿವೆ, ರಾಷ್ಟ್ರಮಟ್ಟದ ಪ್ರಭಾವಿ ನಾಯಕ ಬಿಎಲ್ ಸಂತೋಷ್ ಇರುವ ಉಡುಪಿ ಜಿಲ್ಲೆಗೆ ಈ ಸರಕಾರ ಕೊಟ್ಟದ್ದೇನು? ಎಂದು ಕಾಂಗ್ರೆಸ್ ನಾಯಕ ವಿನಯಕುಮಾರ್ ಸೊರಕೆ ಪ್ರಶ್ನೆ ಮಾಡಿದ್ದಾರೆ.