ಮಂಗಳೂರು, ಮಾ 03 (DaijiworldNews/MS): ಯುದ್ದಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲರೀತಿಯಲ್ಲೂ ಪ್ರಯತ್ನ ಮಾಡುತ್ತಿದೆ. ಆದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅದರಲ್ಲೂ ರಾಜಕೀಯ ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಆರೋಪಿಸಿದ್ದಾರೆ.
'ಉಕ್ರೇನ್ನಿಂದ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ' ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಗುರುವಾರ ಪ್ರತಿಕ್ರಿಯಿಸಿ ಮಾತನಾಡಿದ ಅವರು, 'ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳೂ ಸೇರಿದಂತೆ ದೇಶದ ಜನರನ್ನು ಸುರಕ್ಷಿತವಾಗಿ ಕರೆತರಲು ಪ್ರಧಾನಮಂತ್ರಿ ನಾಲ್ಕು ತಂಡಗಳನ್ನು ರಚಿಸಿದ್ದು, ತಂಡದಲ್ಲಿರುವ ಸಚಿವರು ವಿದೇಶಕ್ಕೆ ತೆರಳಿದ್ದಾರೆ. ಎಲ್ಲ ಸಂಗತಿಗಳ ಅರಿವಿರುವ ಸಿದ್ದರಾಮಯ್ಯ, ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುವುದು ದೇಶಕ್ಕೇ ಅವಮಾನವಾಗಿದೆ. ಇದು ಅವರ ಸಣ್ಣತನವನ್ನು ತೋರಿಸುತ್ತದೆ' ಎಂದು ಟೀಕಿಸಿದ್ದಾರೆ.