ಮಂಗಳೂರು, ಮಾ 03 (DaijiworldNews/HR): ಜಿಲ್ಲೆಯಲ್ಲಿ ಯುವಕರನ್ನು ಮತ್ತು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ದಂಧೆ ನಡೆಸುತ್ತಿರುವುದರ ವಿರುದ್ದ ನಗರ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದು, ಎರಡು ವರ್ಷಗಳಲ್ಲಿ 517 ಡ್ರಗ್ಸ್ ದಂಧೆಗಳನ್ನು ಭೇದಿಸಿದ್ದಾರೆ.
2020ರಲ್ಲಿ 189 ಕೇಸು ದಾಖಲಾಗಿ 254 ಮಂದಿ ಬಂಧಿಸಲಾಗಿದ್ದು, ಇವುಗಳಲ್ಲಿ ಗಾಂಜಾ, ಎಂಡಿಎಂಎ 62 ಗ್ರಾಂ, ಗಾಂಜಾ ಆಯಿಲ್ 26,850 ಗ್ರಾಂ, ಎಲ್ಎಸ್ಡಿ 10 ಶೀಟ್, ಎಂಡಿಎಂಎ ಪೌಡರ್ 103 ಗ್ರಾಂ ವಶಪಡಿಸಿಕೊಳ್ಳಲಾಗಿದೆ. 2021ರಲ್ಲಿ 328 ಪ್ರಕರಣ ದಾಖಲಾಗಿ, 495 ಬಂಧನವಾಗಿದ್ದು ಇದರಲ್ಲಿ ಗಾಂಜಾ 334.383 ಗ್ರಾಂ, ಎಂಡಿಎಂಎ 313 ಗ್ರಾಂ, ಕೊಕೇನ್ 21 ಗ್ರಾಂ, ಹೆರಾಯಿನ್ 750, ಎಂಡಿಎಂಎ 6.790 ಗ್ರಾಂ, ಎಸ್ಎಡಿ 840 ವಶಪಡಿಸಿಕೊಳ್ಳಲಾಗಿದ್ದು, ಈ ಮಾದಕ ಸೊತ್ತುಗಳ ಮೌಲ್ಯ 1,25,56,210 ರೂ. ಎಂದು ಅಂದಾಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಡ್ರಗ್ಸ್ ಜಾಲ ಹೆಚ್ಚಾಗಿ ಯುವಕರನ್ನು ಮತ್ತು ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಬೆಳೆಯುತ್ತಿದ್ದು, ಕೆಲವರು ಆನ್ಲೈನ್ ಮೂಲಕ ನಿಷೇಧಿತ ಮಾದಕ ಖರೀದಿ ಮಾಡುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದರು.
ಇನ್ನು ನಗರ ಪೊಲೀಸ್ ಕಮಿಷನರ್ ಗಾಂಜಾ ಪ್ರಕರಣದ ಆರೋಪಿಗಳನ್ನು ಪೆರೇಡ್ ನಡೆಸಲಾಗಿದ್ದು, ಇದೇ ರೀತಿ ಪ್ರತಿ ಪ್ರಕರಣಗಳ ಮೂಲ ಪತ್ತೆ ಹಚ್ಚಿ ಆರೋಪಿಗಳ ಬಂಧನ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.