ಮಂಗಳೂರು, ಮಾ 02 (DaijiworldNews/DB): ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂದೂರ್ ವೆಲ್ ನ ಅಪಾರ್ಟ್ ಮೆಂಟ್ ವೊಂದರ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ದಂಧೆಗೆ ಯುವತಿಯರನ್ನು/ಮಹಿಳೆಯರನ್ನು ಒದಗಿಸುತ್ತಿದ್ದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ಮಾ 1ರ ಮಂಗಳವಾರದಂದು ದಾಳಿ ನಡೆಸಿ ಮೂವರು ಪಿಂಪ್ ಗಳನ್ನು ವಶಕ್ಕೆ ಪಡೆದುಕೊಂಡು ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.
ಮಂಗಳೂರು ನಗರದ ಪೂರ್ವ( ಕದ್ರಿ ) ಪೋಲಿಸ್ ಠಾಣಾ ವ್ಯಾಪ್ತಿಯ ಬೆಂದೂರ್ ವೆಲ್ 3 ನೇ ಕ್ರಾಸ್ ರಸ್ತೆಯಲ್ಲಿರುವ ಪೀಬಿ ರೆಸಿಡೆನ್ಸಿ ಎಂಬ ಅಪಾರ್ಟ್ ಮೆಂಟ್ ನ 2 ನೇ ಮಹಡಿಯ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಅವರ ನೇತೃತ್ವದ ತಂಡ ದಾಳಿ ನಡೆಸಿದ್ದರು.
ಈ ವೇಳೆ ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಹುಡುಗಿಯರನ್ನು ತರಿಸಿಕೊಂಡು ಅನೈತಿಕ ಚಟುವಟಿಕೆ ದಂಧೆಯನ್ನು ನಡೆಸುತ್ತಿದ್ದ ದಲ್ಲಾಳಿಗಳಾದ ಬಂಟ್ವಾಳ ವಿಟ್ಲಪಡ್ನೂರು ಗ್ರಾಮ ಪರ್ತಿಪಾಡಿಯ ಕೆ.ಪಿ. ಹಮೀದ್ (54), ಆಕಾಶಭವನ ನಂದನಪುರದ ಅನುಪಮಾ ಶೆಟ್ಟಿ(46), ಎಕ್ಕೂರು ವಾಸುಕಿ ನಗರದ ನಿಶ್ಮಿತಾ (23) ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ 5 ಮೊಬೈಲ್ ಫೋನುಗಳು ಹಾಗೂ 50,000 ರೂ. ನಗದು, ಮಾರುತಿ 800 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿಲಾಗಿದೆ.
ಪೊಲೀಸ್ ಆಯುಕ್ತ ಶಶಿಕುಮಾರ್ ಎನ್., ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐಗಳಾದ ರಾಜೇಂದ್ರ ಬಿ., ಪ್ರದೀಪ ಟಿ. ಆರ್. ಹಾಗೂ ಸಿಸಿಬಿ ಸಿಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.