ಉಡುಪಿ, ಮಾ 02 (DaijiworldNews/MS): ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯು ಕೇವಲ ರಾಜಕೀಯ ಪಾದಯಾತ್ರೆ ಆಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾ .2ರ ಬುಧವಾರ ಮಾತನಾಡಿದ ಅವರು "2013 ರಲ್ಲಿ ಕಾಂಗ್ರೆಸ್ ನಮ್ಮ ನಡಿಗೆ ಕೃಷ್ಣೆಯೆಡೆಗೆ ಎಂಬ ಪಾದಯಾತ್ರೆಯನ್ನು ಕೈಗೊಂಡಿತ್ತು. ನಾವು ಅಧಿಕಾರಕ್ಕೆ ಬಂದರೆ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಪ್ರತಿ ವರ್ಷ ಬಜೆಟ್ ನಲ್ಲಿ 10 ಸಾವಿರ ಕೊಟಿ ರುಪಾಯಿಯಂತೆ ಮೀಸಲಿಡುತ್ತೇವೆ ಎಂದಿತ್ತು, ಆದರೆ ಅಧಿಕಾರಕ್ಕೆ ಬಂದ ಮೇಲೆ ಯೋಜನೆಯನ್ನು ಫುರ್ಣ ಮಾಡಲೇ ಇಲ್ಲ. ಮೇಕೆದಾಟು ಪಾದಯಾತ್ರೆಯ ಮೊದಲ ಹಂತದಲ್ಲಿ ಕಾಂಗ್ರೆಸ್ ಕೊರೊನಾ ಹಬ್ಬಿಸುವಲ್ಲಿ ಯಶಸ್ವಿಯಾಗಿದೆ. ಎರಡನೇ ಹಂತದಲ್ಲಿ ಇದೀಗ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಪಾದಯಾತ್ರೆ ಕಾರಣವಾಗಿದೆ. ಮೇಕೆದಾಟು ವಿಚಾರ ಸುಪ್ರಿಂ ಕೋರ್ಟ್ ನಲ್ಲಿ ಇದೆ. ಕಾಂಗ್ರೆಸ್ ಸದನಕ್ಕೆ ಬಂದು ಈ ಯೋಜನೆಯ ಕುರಿತಾಗಿ ಚರ್ಚೆ ನಡೆಸಲಿ. ಸದನವನ್ನು ಬಹಿಷ್ಕರಿಸಿ ಕಾಂಗ್ರೆಸ್ ಏನನ್ನೂ ಸಾಧಿಸಿಲ್ಲ" ಎಂದಿದ್ದಾರೆ.