ಮಂಗಳೂರು, ಮಾ 02 (DaijiworldNews/DB): ಯುದ್ಧಗ್ರಸ್ಥ ಉಕ್ರೇನ್ ನಲ್ಲಿ ಸಿಲುಕಿರುವ ಮಂಗಳೂರು ಮೂಲದ ಇಬ್ಬರು ವಿದ್ಯಾರ್ಥಿಗಳ ಮನೆ ಸಂಸದಗೆ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಮಾ 2ರ ಬುಧವಾರ ಭೇಟಿ ನೀಡಿ ಧೈರ್ಯ ತುಂಬಿದರು.
ಬಿಜೈ ನ್ಯೂರೋಡ್ ನಲ್ಲಿರುವ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಐವರು ವಿದ್ಯಾರ್ಥಿಗಳ ಕುಟುಂಬಗಳ ಪೈಕಿ ಇಬ್ಬರ ಮನೆಗೆ ಈಗಾಗಲೇ ಭೇಟಿ ನೀಡಲಾಗಿದ್ದು, ಹೆತ್ತವರಿಗೆ ಧೈರ್ಯ ತುಂಬಲಾಗಿದೆ. ಇನ್ನು ಇಬ್ಬರು ವಿದ್ಯಾರ್ಥಿಗಳ ಮನೆಗೆ ಬುಧವಾರವೇ ತೆರಳಲಾಗುವುದು. ಓರ್ವನ ಮನೆಯಲ್ಲಿ ಯಾರೂ ಇಲ್ಲದ ಕಾರಣ ಗುರುವಾರ ತೆರಳಿ ಪೋಷಕರಲ್ಲಿ ಮಾತನಾಡಿ ಆತ್ಮವಿಶ್ವಾಸ ತುಂಬಲಾಗುವುದು ಎಂದರು.
ಭಾರತದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಸ್ಥರ ಜೊತೆ ಕೇಂದ್ರ ಸರಕಾರ ನಿರಂತರ ಸಂಪರ್ಕದಲ್ಲಿದೆ. ಕರ್ನಾಟಕ ಮೂಲದವರೊಂದಿಗೂ ರಾಜ್ಯ ಸರಕಾರ ಸಂಪರ್ಕದಲ್ಲಿದೆ. ವಿದ್ಯಾರ್ಥಿಗಳ ಮನೆಯವರಿಗೆ ಆತ್ಮವಿಶ್ವಾಸ ತುಂಬುವ ಸಲುವಾಗಿ ಈಗಾಗಲೇ ಬಿಜೆಪಿ ಪಕ್ಷದ ವತಿಯಿಂದ ವಾರ್ ರೂಂ ಕೂಡಾ ತೆರೆಯಲಾಗಿದ್ದು, ನಿರಂತರವಾಗಿ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.