ಬಂಟ್ವಾಳ, ಮಾ 02 (DaijiworldNews/DB): ಚೂರಿ ಹಿಡಿದುಕೊಂಡು ಮಸೀದಿಯೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ಥಳೀಯರು ಹಿಡಿದು ಪೋಲಿಸರಿಗೊಪ್ಪಿಸಿದ ಘಟನೆ ಬಿಸಿರೋಡ್ ಬಳಿಯ ಮಿತ್ತಬೈಲು ಕೇಂದ್ರ ಜುಮಾ ಮಸೀದಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಆರೋಪಿಯನ್ನು ಬಾಬು ಪೂಜಾರಿ (60) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಮಸೀದಿ ಬಳಿ ಕೆಂಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದ ಆತ ಮಸೀದಿ ಬಳಿ ವಾಹನ ನಿಲ್ಲಿಸಿ ಅಕ್ರಮವಾಗಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದುದಲ್ಲದೆ, ಮಸೀದಿಯೊಳಗೆ ನುಗ್ಗಲು ಯತ್ನಿಸಿದ್ದಾನೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಡಿದು ವಿಚಾರಿಸಿದಾಗ ಆತ ತಾನು ಮಡಿಕೇರಿಯಿಂದ ಬಂದಿದ್ದು, ಪ್ರಾರ್ಥನೆ ಮಾಡಲು ಒಬ್ಬ ಧರ್ಮಗುರು ಬೇಕು ಎಂದಿದ್ದಾನೆ. ಆತನ ದ್ವಿಚಕ್ರ ವಾಹನ ಪರಿಶೀಲಿಸಿದಾಗ ಅದರಲ್ಲಿ ಚಾಕು ಇರುವುದು ಪತ್ತೆಯಾಗಿದೆ. ತತ್ ಕ್ಷಣ ಸ್ಥಳೀಯರು ಮಸೀದಿ ಆಡಳಿತ ಕಮಿಟಿಗೆ ಮಾಹಿತಿ ನೀಡಿದ್ದು, ಆಡಳಿತ ಕಮಿಟಿಯವರು ವಿಚಾರಿಸಿದಾಗ ಆತ ಕಲ್ಲಡ್ಕ ನಿವಾಸಿ ಬಾಬು ಎಂಬುದಾಗಿ ಮಾಹಿತಿ ಲಭಿಸಿದೆ. ಬಳಿಕ ಆತನನ್ನು ಬಂಟ್ವಾಳ ಪೋಲಿಸರ ವಶಕ್ಕೆ ಒಪ್ಪಿಸಲಾಯಿತು. ಆರೋಪಿಯ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.