ಬೆಳ್ತಂಗಡಿ, ಮಾ.01 (DaijiworldNews/SM): ಕಾಂಗ್ರೆಸ್ ಷಡ್ಯಂತ್ರ, ಪ್ರೇರಣೆ, ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ. ಕೆಂಪು ಕೋಟೆ ಮೇಲೆ ಭಗವಧ್ವಜ ಹಾರಿಸ್ತೀವಿ ಅಂತ ಈಶ್ವರಪ್ಪ ಹೇಳಿದ್ದರು. ಅದನ್ನು ಮಾಡಿಯೇ ಸಿದ್ಧ ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.
ಈಶ್ವರಪ್ಪ ಹೇಳಿದ್ದರು ಅನ್ನೋ ಕಾರಣಕ್ಕೆ ಕಾಂಗ್ರೆಸ್ಸಿಗರು ಅಧಿವೇಶನ ಮೊಟಕುಗೊಳಿಸಿದ್ದರು. ಆದರೆ ಬೆಳ್ತಂಗಡಿಯ ಈ ಸಭೆಯಲ್ಲಿ ಬೆಳ್ತಂಗಡಿ ಶಾಸಕನಾಗಿ ನಾನು ಹೇಳ್ತೆನೆ. ಕೆಂಪು ಕೋಟೆಯ ಮೇಲೆ ಭಗವಧ್ವಜ ಹಾರಿಸಿಯೇ ಸಿದ್ದ ಎಂದು ಹೇಳಿರುವ ಹರೀಶ್ ಪೂಂಜಾ, ಆದರೆ ಕೆಂಪುಕೋಟೆಯ ಮೇಲೆ ಭಗವಧ್ವಜ ಹಾರಿಸೋದು ರಾಷ್ಟ್ರಧ್ವಜದ ಕೆಳಗೆ. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಕೆಳಗೆ ಭಗವಧ್ವಜ ಹಾರಿಸ್ತೀವಿ. ಭಗವಧ್ವಜ ಹಾರಿಸೋದನ್ನ ಯಾವ ಪಕ್ಷ ದಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಇದು ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಸಮಾಜದ ಸಂಕಲ್ಪ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಾಲಗಂಗಾಧರ ತಿಲಕರು ಭಗವಧ್ವಜ ಎದುರಿಟ್ಟು ಹೋರಾಡಿದ್ರು. ಹಿಂದೂ ಸಮಾಜದ ಶಕ್ತಿಯಾಗಿದ್ದ ಶಿವಾಜಿ ಮಹಾರಾಜರ ಶಕ್ತಿಯೂ ಭಗವಧ್ವಜ. ತುಳು ಭಾಷೆಯಲ್ಲಿ ಹರೀಶ್ ಪೂಂಜಾ ಮಾಡಿದ ಭಾಷಣದ ತುಣುಕು ಇದೀಗ ವೈರಲ್ ಆಗಿದೆ.
ಶಿವಮೊಗ್ಗದ ಹರ್ಷ ಹತ್ಯೆ ಖಂಡಿಸಿ ಬೆಳ್ತಂಗಡಿಯಲ್ಲಿ ಹಿಂದೂ ಜನಜಾಗೃತಿ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ.