ಚಾಮರಾಜನಗರ,ಡಿ 16 (MSP): ಇಲ್ಲಿನ ಹನೂರು ಬಳಿಯ ಸುಳುವಾಡಿಯ ಮಾರಮ್ಮ ದೇಗುಲದ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಭಾನುವಾರ 13 ಕ್ಕೇರಿದೆ. ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆಯರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಸುಳುವಾಡಿ ದೇಗುಲದ ಸುತ್ತಮುತ್ತಲಿನ ಗ್ರಾಮಗಳಲ್ಲಿ ದುಃಖ ಮಡುಗಟ್ಟಿದೆ
ಇನ್ನು ದೇಗುಲದಲ್ಲಿ ನೀಡಲಾದ ಪ್ರಸಾದ ತಿಂದು ತೀವ್ರ ಅಸ್ವಸ್ಥರಾಗಿದ್ದ ಸಾಲಮ್ಮ (35 ವರ್ಷ) ಮತ್ತು ಮಗೇಶ್ವರಿ (35) ಎಂಬ ಮಹಿಳೆಯರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಶನಿವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಇವರಿಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೆ ಮೈಸೂರಿನ ಕೆ. ಆರ್.ಆಸ್ಪತ್ರೆ, ಜೆಎಸ್ಎಸ್ ಹಾಗೂ ಅಪೋಲೋ ಆಸ್ಪತ್ರೆಗಳಲ್ಲೂ 40 ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರು ಮಕ್ಕಳು ಸೇರಿ 13 ಮಂದಿಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಇನ್ನೂ ಕೂಡಾ ಆಸ್ಪತ್ರೆಗೆ ದಾಖಲಾದ ಅಸ್ವಸ್ಥರು ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ.
ಒಂದು ಕಡೆ ದುರಂತದ ನೋವಾದರೆ, ಬದುಕುಳಿದವರಿಗೆ ಚಿಕಿತ್ಸೆ ಕೊಡಿಸುವುದೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾರಣ ಕೊಳ್ಳೇಗಾಲ ತಾಲೂಕಾಸ್ಪತ್ರೆ ಕುಂದುಕೊರತೆಗಳೇ ಎದ್ದುಕಾಣುತ್ತಿದೆ.