ಮಂಗಳೂರು, ಮಾ 01 (DaijiworldNews/DB): ಮಹಾಶಿವರಾತ್ರಿಯನ್ನು ಮಂಗಳೂರು ನಗರದಾದ್ಯಂತ ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ ವಿವಿಧ ಶಿವ ದೇವಾಲಯಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು.
ಮಹಾಶಿವರಾತ್ರಿ ಶಿವನಿಗೆ ವಿಶೇಷವಾದ ದಿನವಾಗಿದ್ದು, ಅಂದು ಶಿವನನ್ನು ಪೂಜಿಸುವುದರಿಂದ ಸನ್ಮಂಗಳವಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಶಿವ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ನಡೆಯುತ್ತಿದ್ದು, ವಿಶೇಷ ಪೂಜಾವಿಧಿಗಳು, ಅಭಿಷೇಕ ಜರಗಿದವು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಕದ್ರಿ ಶ್ರೀ ಮಂಜುನಾಥ ಕ್ಷೇತ್ರ ಸೇರಿದಂತೆ ವಿವಿಧ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರಗಿದವು.
ದೇವಳಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮನೆ ಮನೆಗಳಲ್ಲಿ, ದೇವಳಗಳಲ್ಲಿ ರಾತ್ರಿ ಜಾಗರಣೆ, ಭಜನಾ ಸೇವೆ ಜರಗಿತು. ಶಿವನಿಗೆ ಆತ್ಯಂತ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಿಸಿ ಭಕ್ತಾದಿಗಳು ಪುನೀತರಾದರು.