ಬಂಟ್ವಾಳ, ಫೆ 28 (DaijiworldNews/MS): ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಗ್ರಾ.ಪಂ. ಅಧ್ಯಕ್ಷನೇ ಸದಸ್ಯನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಚೂರಿಯಿಂದ ಇರಿಯಲು ಯತ್ನಿಸಿದ ಘಟನೆ ನಾವೂರು ಗ್ರಾ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದಿದೆ.
ಗಾಯಗೊಂಡ ಗ್ರಾ.ಪಂ.ಸದಸ್ಯ ಜನಾರ್ಧನ್ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಬಂಟ್ಚಾಳ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದು, ತನಗೆ ಗ್ರಾ.ಪಂ.ಅಧ್ಯಕ್ಷ ಉಮೇಶ್ ಕುಲಾಲ್ ಅವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗ್ರಾ.ಪಂ.ನಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಲ್ ಪಾವತಿ ವಿಚಾರಕ್ಕೆ ಪ್ರಶ್ನೆ ಕೇಳಿದ್ದಕ್ಕೆ ಅಧ್ಯಕ್ಷ ಹಲ್ಲೆ ನಡೆಸಿ ಬಳಿಕ ಚೂರಿಯಿಂದ ಇರಿತ ಮಾಡಲು ಮುಂದಾಗಿದ್ದು, ಸದಸ್ಯರ ಮಧ್ಯೆ ಪ್ರವೇಶದಿಂದ ಚೂರಿ ಇರಿತದಿಂದ ಬಚಾವ್ ಆಗಿದ್ದೇನೆ ಎಂದು ಹಲ್ಲೆ ಗೊಳಗಾದ ಸದಸ್ಯ ಜನಾರ್ದನ ಆರೋಪಿಸಿದ್ದಾರೆ.
ಸದಸ್ಯ ಜನಾರ್ಧನ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮಾಂತರ ಠಾಣಾಧಿಕಾರಿ ಹರೀಶ್ ತನಿಖೆ ನಡೆಸುತ್ತಿದ್ದಾರೆ.