ಕಾರ್ಕಳ, ಫೆ 28 (DaijiworldNews/MS): ಕಲೆ,ಸಾಹಿತ್ಯ,ಕ್ರೀಡೆ,ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ಗುರುತಿಸುವಲ್ಲಿ ಕಾರ್ಕಳದ ಪ್ರತಿಭೆಗಳು ಗಣನೀಯವಾಗಿ ಸೇವೆಗೈದಿದೆ. ಕಾರ್ಕಳ ಐತಿಹಾಸಿಕ ಕ್ಷೇತ್ರ. ಬೇರೆಡೆಗೆ ಹೋಲಿಸಿದರೆ ಇಲ್ಲಿರುವಷ್ಟು ಅಗಾಧ ಸಂಸ್ಕೃತಿ, ಶ್ರೀಮಂತಿಕೆ ಬೇರೆ ಕ್ಷೇತ್ರದಲ್ಲಿಲ್ಲ. ಹಲವು ಪ್ರೇಕ್ಷಣಿಯ ಸ್ಥಳಗಳನ್ನು ಒಳಗೊಂಡು ಜೈನ ಕಾಶಿ ಎಂದೆ ಕರೆಯಲ್ಪಡುತ್ತಿದೆ. ಎಲ್ಲರ ಪ್ರಯತ್ನದಿಂದ ಕಾರ್ಕಳ ಬೆಳೆದಿದೆ. ಹಿರಿಯರು ಸಾಹಿತ್ಯ ಕೃಷಿ, ಸಾಂಸ್ಕೃತಿಕ ಕೊಡುಗೆಯನ್ನಷ್ಟೆ ಅಲ್ಲ ಧಾರ್ಮಿಕವಾಗಿಯೂ ಕಾರ್ಕಳವನ್ನು ಕಟ್ಟಿದ್ದಾರೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ಕುಮಾರ್ ಹೇಳಿದರು.
ಸ್ವರಾಜ್ ಮೈದಾನದಲ್ಲಿ ನಡೆದ ಕಾರ್ಕಳ ಉತ್ಸವ ಬೃಹತ್ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ಸವದ ಯಶಸ್ವಿಗೆ 37 ಸಮಿತಿಗಳು ರಚನೆಯಾಗಿವೆ. ಕಾರ್ಕಳ ಉತ್ಸವವು ಯಶಸ್ಸು ಮೂಲಕ ವಿಶ್ವದಾಖಲೆ ಬರೆಯಲಿದೆ. ಕುಂದು ಕೊರತೆ ಬಾರದಂತೆ ಪ್ರತಿಯೊಬ್ಬರು ಗಮನಿಸಬೇಕು. ಮಾ.೧೦ರಿಂದ ೧೭ರ ತನಕ ಮೈದಾನದಲ್ಲಿ ವಿವಿಧ ಕಾರ್ಯಕ್ರಮ, 18ರಿಂದ 20ರ ತನಕ ಸ್ವರಾಜ್ ಮೈದಾನದಲ್ಲಿ ಉತ್ಸವ ನಡೆಯುತ್ತದೆ. ಮನೋರಂಜನೆಯಷ್ಟೆ ಅಲ್ಲ ಎಲ್ಲ ಚಟುವಟಿಕೆ ಮೇಳೈಸಬೇಕು ಎನ್ನುವ ಕಾರಣಕ್ಕೆ ಹತ್ತಾರು ಹೊಸ ಪ್ರಯತ್ನ ಜೋಡಿಸಿಕೊಂಡಿದ್ದೇವೆ ಎಂದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ, ಕಾರ್ಕಳದ ಜನ ಶ್ರೇಷ್ಠರು. ಸರ್ವ ಕ್ಷೇತ್ರಗಳಲ್ಲಿ ಸಾಧನಶೀಲರು. ಸಚಿವ ಸುನಿಲ್ಕುಮಾರ್ ಕ್ಷೇತ್ರಕ್ಕೆ ಅಭಿವೃದ್ಧಿ ಮೂಲಕ ಹೆಚ್ಚು ಕೊಡುಗೆ ನೀಡಿದ್ದಾರೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಮತ್ತಷ್ಟೂ ಕೊಡುಗೆ ನಿರೀಕ್ಷಿಸುತ್ತಿದ್ದೇವೆ ಎಂದರು. ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಮಾತನಾಡಿ, ಕಾರ್ಕಳ ಉತ್ಸವ ಮೂಲಕ ಇಲ್ಲಿನ ಕಲೆ, ಸಂಸ್ಕೃತಿಗಳು ಪಸರಿಸುವಂತಾಗಲಿ. ಸರ್ವರ ಸಹಕಾರವನ್ನು ಇದೇ ಸಂದರ್ಭಲ್ಲಿ ಕೋರಿದರು.
ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ ಕಾರ್ಕಳ ಉತ್ಸವದ ಕಲ್ಪನೆ ಸಕಾರಗೊಳ್ಳಲಿ. ಇದರಿಂದ ಹಲವಾರು ಪ್ರತಿಭೆಗಳ ಅನಾವರಣಗೊಳ್ಳಲಿ ಎಂದು ಶುಭ ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಜಂಟಿ ನಿದೇಶಕ ಮಲ್ಲಿಕಾರ್ಜುನ ಸ್ವಾಮಿ, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕಿ ನಿರ್ದೇಶಕಿ ಪೂರ್ಣಿಮ, ಕುಂದಾಪುರ ವಿಭಾಗ ಸಹಾಯಕ ಕಮಿಷನರ್ ರಾಜು, ತಹಶಿಲ್ದಾರ್ ಪುರಂದರ ಕೆ. ಶಿಲ್ಪಿ ಸತೀಶ್ ಆಚಾರ್ಯ, ಉದ್ಯಮಿ ಸುಬ್ರಾಯ ಪೈ, ಸಂತೋಷ್ ಡಿಸಿಲ್ವ, ಬಾಲಾಜಿ ಅಯ್ಯಪ್ಪ ಮಂದಿರದ ಬಾಲಕೃಷ್ಣ ಹೆಗ್ಡೆ ವೇದಿಕೆಯಲ್ಲಿದ್ದರು. ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ಪ್ತಸ್ತಾವನೆಗೈದರು. ಪ್ರಭಾಕರ ಶೆಟ್ಟಿ ಕೊಂಡಲ್ಲಿ ಸ್ವಾಗತಿಸಿದರು. ರಾಜೇಂದ್ರ ಭಟ್ ನಿರೂಪಿಸಿದರು.
ಏನೆಲ್ಲ ವಿಶೇಷತೆ?
150ಕ್ಕೂ ಅಧಿಕಕ ಗಾಳಿಪಟ, 200ಕ್ಕೂ ಆಧಿಕ ವಸ್ತು ಪ್ರದರ್ಶನ ಮತ್ತು ಮಾರಾಟ, ಶ್ವಾನ ಪ್ರದರ್ಶನ, ಗೂಡುದೀಪ ಪ್ರದರ್ಶನ, ಆಹಾರ ಮೇಳ, 100ಕ್ಕೂ ಹೆಚ್ಚು ಹೊಟೇಲ್ಗಳು, ಹೆಲಿಕಾಪ್ಟರ್, ಸಹಿತ ಉತ್ಸವದಲ್ಲಿ ಏನಿಲ್ಲ ಏನಿಲ್ಲ ಎನ್ನುವಷ್ಟು ಕಾರ್ಯಕ್ರಮ ಜೋಡಿಸಿಕೊಳ್ಳಲಾಗಿದೆ. ಬಸ್ ನಿಲ್ದಾಣ,, ಗೊಮ್ಮಟೇಶ್ವರ ಬೆಟ್ಟ, ಜೋಡುರಸ್ತೆ, ಈ 3 ಕಡೆ ಉಪವೇದಿಕೆ ನಿರ್ಮಿಸಲಾಗುತ್ತಿದೆ. ಹೀಗೆ 10 ದಿನ ಹತ್ತಾರು ಚಟುವಟಿಕೆಯ ಕೇಂದ್ರವಾಗಲಿದೆ. ಮಾ.5ಕ್ಕೆ ಮನೆಗಳಿಗೆ ಆಮಂತ್ರಣ ಹಂಚುವಿಕೆ, ಮಾ.6ಕ್ಕೆ ಉತ್ಸವ ಸ್ವಚ್ಛತೆ ಅಭಿಯಾನದ ಮೂಲಕ ಇಡಿ ನಗರ ಸ್ವಚ್ಛಗೊಳ್ಳಲಿದೆ. ಬೆಳಗ್ಗೆ 6ರಿಂದ 12ತನಕ ನಡೆಯಲಿದೆ. ಮಾ.16ರಂದು ಮನೆಮನೆಗಳಲ್ಲಿ ಮೆಹಂದಿ ಉತ್ಸವ, ಮನೆ, ಕಟ್ಟಡಗಳನ್ನು ಅಲಂಕರ ಮಾಡುವಂತೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಸಮರ್ಪಕ ಆದ್ಯತೆ ನೀಡಬೇಕಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಕಾರ್ಕಳ ಉತ್ಸವದ ಪೂರ್ವ ತಯಾರಿಯಾಗಿ ಸಾವಿರ ಬಲೂನ್ಗಳನ್ನು ಆಕಾಶದ ಕಡೆಗೆ ತೇಲಿ ಬಿಟ್ಟು ಚಾಲನೆ ನೀಡಲಾಯಿತು. ನಾಡಿನ ವಿವಿಧ ಕಲಾತಂಡಗಳು ಆಗಮಿಸಿದ್ದು ಪ್ರದರ್ಶನ ನೀಡಿದರು.