ಮಂಗಳೂರು,ಫೆ 28 (DaijiworldNews/MS): ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯು ಕೇವಲ ಶೈಕ್ಷಣಿಕ ಪ್ರವರ್ಧನೆಗೆ ಮಾತ್ರ ಸೀಮಿತಗೊಂಡಿಲ್ಲ. ಸಾಮಾಜಿಕ ಹಾಗೂ ವಿಶೇಷವಾಗಿ ಸಾಹಿತ್ಯಾತ್ಮಕ ವಿಚಾರಗಳಿಗೆ ಸದಾ ಮುಂಚೂಣಿಯಲ್ಲಿ ನಿಂತು ಸ್ಪಂದಿಸುತ್ತದೆ. ಆದುದರಿಂದ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಭಾಷಾ ಪ್ರವರ್ತಕ ಸಂಸ್ಥೆಗಳ ಪ್ರಗತಿಪರ ಕಾರ್ಯಗಳಿಗೆ ಸಹಕಾರ ನೀಡುವುದನ್ನು ನಮ್ಮ ಕರ್ತವ್ಯವೆಂದು ತಿಳಿದಿದ್ದೇವೆ ಎಂದು ಭಾರತೀ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಶ್ರೀ. ಎಂ. ತಿರುಮಲೇಶ್ವರ. ಭಟ್ ಅಭಿಪ್ರಾಯಪಟ್ಟರು.
ಅವರು ನಂತೂರು ಪದವು ಶ್ರೀ ಭಾರತೀ ಸಮೂಹ ಸಂಸ್ಥೆ ಸಮುಚ್ಚಯದಲ್ಲಿ ಅನಾವರಣಗೊಂಡ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಾಲಯವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ ಶ್ರೀನಾಥ ಅವರು ಭಾರತೀ ಸಮೂಹ ಸಂಸ್ಥೆಯು ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಶ್ರಯ ನೀಡಿದೆ. ಜಿಲ್ಲೆಯಲ್ಲಿ ಕನ್ನಡ ಮಾತೆ ಭುವನೇಶ್ವರಿಯ ಆರಾಧನೆಗೆ ಅನುವು ಮಾಡಿಕೊಟ್ಟ ಸಂಸ್ಥೆಗೆ ಕೃತಜ್ಞತರು. ಈ ಶಿಕ್ಷಣ ರಂಗದ ಆವರಣದಲ್ಲಿ ಜಿಲ್ಲೆಯ ಕನ್ನಡಿಗರ ಒಕ್ಕೊರಲ ದನಿ ಮೊಳಗಲಿ, ಎಲ್ಲರೂ ಒಂದಾಗಿ ಜಿಲ್ಲಾದ್ಯಂತ ಕನ್ನಡದ ತೇರನ್ನು ಎಳೆದು ಸಂಘಟಿತರಾಗೋಣ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ವಿನಯ ಆಚಾರ್ಯ. ಎಚ್. ಮತ್ತು ಶ್ರೀಮತಿ ರಾಜೇಶ್ವರಿ. ಎಂ , ಗೌರವ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್ ಸಂಘ ಸಂಸ್ಥೆಗಳ ಪ್ರತಿನಿಧಿ ಮೋಹನದಾಸ ಸೂರತ್ಕಲ್ ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೂತನ ಕಾರ್ಯಾಲಯದಲ್ಲಿ ಜಿಲ್ಲಾ ಕ.ಸಾ.ಪ ಸಭೆ ನೆರವೇರಿತು.