ಉಡುಪಿ, ಫೆ 28 (DaijiworldNews/MS): ಉಡುಪಿ ಕಾಂಗ್ರೆಸ್ ನಲ್ಲಿ ಮತ್ತೆ ಭಿನ್ನಮತ ಬಹಿರಂಗವಾಗಿದೆ. ಉಡುಪಿ ಕಾಂಗ್ರೆಸ್ ಭವನದಲ್ಲಿ ಫೆ.27ರ ಭಾನುವಾರ ನಡೆದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯು ಮತ್ತೊಂದು ಸುತ್ತಿನ ಭಿನ್ನಮತಕ್ಕೆ ಸಾಕ್ಷಿಯಾಗಿದ್ದು, ಪಕ್ಷದ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಉಡುಪಿ ಕಾಂಗ್ರೆಸ್ನಲ್ಲಿ ಪ್ರಮುಖವಾಗಿ ನಾಯಕತ್ವದ ಸಮಸ್ಯೆ ಎದುರಾಗಿದೆ. ಪಕ್ಷದ ಕಾರ್ಯಕರ್ತರಿಗೆ ನಾಯಕನನ್ನು ಆಯ್ಕೆ ಮಾಡಲು ಕಷ್ಟವಾಗುತ್ತಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ನಂತರ ಉಡುಪಿ ಕಾಂಗ್ರೆಸ್ನ ಪ್ರಮುಖ ಮುಖವಾಗಿದ್ದ 'ಪ್ರಮೋದ್ ಮಧ್ವರಾಜ್' ತೆರೆಗೆ ಮರೆಗೆ ಸರಿದಂತಾದರು. ಇದರಿಂದ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.
ಫೆಬ್ರವರಿ 27 ರಂದು ಭಾನುವಾರ ನಡೆದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ವಿಧಾನಪರಿಷತ್ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ಮತ್ತು ಎಂಎಲ್ಸಿ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು. ಕೆಲ ಕಾಂಗ್ರೆಸ್ಸಿಗರು ಜಿಲ್ಲಾ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ರಾಜ್ಯ ಮಟ್ಟದ ನಾಯಕರ ಗಮನಕ್ಕೆ ತರುವಂತೆ ತಿಳಿಸಿದರು. ನಡೆಯುತ್ತಿರುವ ಕೆಲವು ವಿಷಯಗಳ ಬಗ್ಗೆ ಪಕ್ಷದ ನಿರ್ಧಾರವನ್ನು ಸ್ಪಷ್ಟಪಡಿಸಬೇಕೆಂದು ಅವರು ಒತ್ತಾಯಿಸಿದರು.
ಈ ಘಟನೆಯು ಪಕ್ಷದಲ್ಲಿ ನಾಯಕತ್ವದ ಕೊರತೆಯಿಂದ ಕೈ ಪ್ರಮುಖರಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಪಕ್ಷದೊಳಗಿನ ಪ್ರಚಲಿತ ಸಮಸ್ಯೆಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಪಕ್ಷದ ಅನೇಕ ಸದಸ್ಯರು ಈಗಲೂ ಪ್ರಮೋದ್ ಮಧ್ವರಾಜ್ ಅವರನ್ನು ತಮ್ಮ ನಾಯಕ ಎಂದು ಪರಿಗಣಿಸಿದ್ದಾರೆ ಮತ್ತು ಅವರ ನೇತೃತ್ವದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ.
ಆದರೆ ಉಡುಪಿ ಜಿಲ್ಲಾ ಕಾಂಗ್ರೆಸ್ಗಿಂತ ಪ್ರಮೋದ್ ಮಧ್ವರಾಜ್ ರಾಜ್ಯ ರಾಜಕಾರಣಕ್ಕೆ ಸೇರಲು ಹೆಚ್ಚು ಒತ್ತು ನೀಡುತ್ತಿರುವಂತೆ ಕಾಣುತ್ತಿದೆ. ‘ಪ್ರಮೋದ್ ಮಧ್ವರಾಜ್ಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ರಾಜ್ಯ ನಾಯಕರೇ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಉಡುಪಿ ಕಾಂಗ್ರೆಸ್ನ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಚುನಾವಣೆ ಸನ್ನಿಹಿತವಾಗಿರುವ ಕಾಲಘಟ್ಟದಲ್ಲಿ ನಾಯಕತ್ವದ ಪ್ರಶ್ನೆ ಪಕ್ಷಕ್ಕೆ ತೀವ್ರವಾಗಿ ಕಾಡಲಿದೆ. ಪಕ್ಷದ ಯಾವುದೇ ಪದಾಧಿಕಾರಿಗಳು ನಾಯಕತ್ವದ ಕೊರತೆಯ ಪ್ರಶ್ನೆಯನ್ನು ಒಪ್ಪದಿದ್ದರೂ, ಮುಂಬರುವ ಚುನಾವಣೆಯ ಸಂಧರ್ಭದಲ್ಲಿ ಯಾವ ನಾಯಕರ ಅಡಿಯಲ್ಲಿ ಕೆಲಸ ಮಾಡುವುದು ಎಂಬುವುದು ಪಕ್ಷದ ಕಾರ್ಯಕರ್ತರಿಗೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.