ಪುತ್ತೂರು, ಡಿ 16 (MSP): ತಾಲೂಕಿನ ಕೊಳ್ತಿಗೆ ಗ್ರಾಮದ ಮೂಲೆತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಶನಿವಾರ ಸಂಜೆ ಮನೆಯ ಸಮೀಪದಲ್ಲೇ ಇದ್ದ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ನೀರಿನ ಟ್ಯಾಂಕ್ನಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸಮೀಪದ ಕೆಂಪುಗುಡ್ಡೆ ನಿವಾಸಿ ಗುಡ್ಡಪ್ಪಗೌಡ ಅವರ ಪುತ್ರಿ 7ನೇ ತರಗತಿ ಪ್ರಜ್ಞಾಶ್ರೀ(12), ದಾಮೋದರ ಗೌಡ ಅವರ ಪುತ್ರಿ ಸಂಜನಾ(10) ಮೃತರು.ಬಾಲಕಿಯರಿಬ್ಬರು, ಪೆರ್ಲಂಪಾಡಿ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ಬಾಲಕಿಯರು ಆಟವಾಡಲೆಂದು ಮನೆಯಿಂದ ತೆರಳಿದ್ದವರು ಬಳಿಕ ನಾಪತ್ತೆ ಆಗಿದ್ದರು. ಹುಡುಕಾಟ ನಡೆಸಿದ ವೇಳೆ ಮನೆಯ ಪಕ್ಕದ ಉದಯ ಭಟ್ ಅವರ ಜಾಗದಲ್ಲಿರುವ ನೀರಿನ ಟ್ಯಾಂಕ್ನಲ್ಲಿ ಶವಗಳು ಪತ್ತೆ ಆಗಿವೆ. 12 ಲಕ್ಷ ಲೀ. ಸಂಗ್ರಹ ಸಾಮರ್ಥ್ಯ ದ ನೀರಿನ ಟ್ಯಾಂಕ್ ಇದಾಗಿದೆ.
ತೋಟಗಾರಿಕಾ ಇಲಾಖೆಯ ನೆರವಿನಲ್ಲಿ ನಿರ್ಮಾಣಗೊಳ್ಳುತ್ತಿದ್ದ ನೀರಿನ ಟ್ಯಾಂಕ್ ಇದು. ಟಾರ್ಪಾಲಿನ್ ಹಾಕಿ ನೀರು ತುಂಬಿಸಿಡಲಾಗಿತ್ತು. ದಂಡೆಯನ್ನು ಇನ್ನಷ್ಟೇ ನಿರ್ಮಿಸಬೇಕಾಗಿದೆ. ಗುಡ್ಡಪ್ಪ ಗೌಡರ ಮನೆಯಿಂದ ದಾಮೋದರ ಗೌಡರ ಮನೆಗೆ ಹೋಗುವ ದಾರಿಯಲ್ಲಿ ಈ ಟ್ಯಾಂಕ್ ಇದೆ. ಒಬ್ಬ ಬಾಲಕಿ ಟ್ಯಾಂಕ್ಗೆ ಕಾಲುಜಾರಿ ಬಿದ್ದಾಗ ಆಕೆಯನ್ನು ರಕ್ಷಿಸಲು ಹೋದ ಇನ್ನೊಬ್ಬಾಕೆಯೂ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಬೆಳ್ಳಾರೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.