ಮಂಗಳೂರು,ಫೆ 26 (DaijiworldNews/MS): ಕೇಸರಿ ಶಾಲು- ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ದ.ಕ. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ಸುತ್ತಮುತ್ತ ವಿಧಿಸಿದ್ದ ನಿಷೇಧಾಜ್ಞೆಯನ್ನು ಮಾರ್ಚ್ 5ರವರೆಗೆ ವಿಸ್ತರಿಸಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ವಿಧಿಸಿದ್ದ ನಿಷೇಧಾಜ್ಞೆಯ ಅವಧಿ ಫೆ.26 ಶುಕ್ರವಾರ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ದ.ಕ. ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳ ಸುತ್ತಮುತ್ತ 200 ಮೀಟರ್ ಪ್ರದೇಶದಲ್ಲಿ ಫೆ.28ರ ಬೆಳಗ್ಗೆ 6 ಗಂಟೆಯಿಂದ ಮಾರ್ಚ್ 5ರ ಸಂಜೆ 6ರವರೆಗೆ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಈ ಹಿಂದೆ ಫೆ.19ರ ಸಂಜೆ 6ರಿಂದ ಫೆ.26ರ ಸಂಜೆ 6ರವರೆಗೆ ನಿಷೇಧಾಜ್ಞೆ ವಿಧಿಸಲಾಗಿತ್ತು. ಆದರೆ ಹಿಜಾಬ್-ಕೇಸರಿ ಶಾಲು ವಿವಾದ ಮುಕ್ತಾಯಗೊಳ್ಳದ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ವಿಸ್ತರಿಸಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.