ಬಂಟ್ವಾಳ, ಫೆ. 25 (DaijiworldNews/SM): ಕಪ್ಪು ಕಲ್ಲಿನ ಕೋರೆಯ ಗುಂಡಿಗೆ ಬಿದ್ದು ಬಾಲಕ ಸೇರಿ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ನರಿಕೊಂಬು ಎಂಬಲ್ಲಿ ನಡೆದಿದೆ.
ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಬೋರುಗುಡ್ಡೆ ನಿವಾಸಿ ಜಗದೀಶ್(39) ಹಾಗೂ ಬಾಲಕ ನಿಧೀಶ್(16)ಎಂಬವರು ಮೃತಪಟ್ಟ ದುರ್ದೈವಿಗಳು. ನರಿಕೊಂಬು ಗ್ರಾಮದಲ್ಲಿ ಅಕ್ರಮವಾಗಿ ಕಪ್ಪು ಕಲ್ಲಿನ ಕೋರೆ ಕಾರ್ಯಚರಿಸುವುದಲ್ಲದೆ ಸ್ಥಳೀಯ ಮನೆಗೆ ಹಾನಿಯಾಗುತ್ತದೆ ಎಂದು ಪ್ರತಿಭಟನೆ ನಡೆದಿತ್ತು. ಆದರೆ ಪ್ರತಿಭಟನೆಗೆ ಜಗ್ಗದೆ ಕೋರೆ ಸಲೀಸಲಾಗಿ ಕಾರ್ಯಚರಿಸುತ್ತಿದ್ದು, ಅದೇ ಕೋರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಸ್ಥಳಕ್ಕೆ ಬೇಟಿ ನೀಡದೆ ಶವವನ್ನು ಕದಲಿಸಲು ನಾವು ಬಿಡುವುದಿಲ್ಲ ಎಂದು ಪಟ್ಟು ಹಿಡದ ಸಾರ್ವಜನಿಕರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅನಧಿಕೃತ ಕೋರೆ ಎಂದು ನಾವು ಪ್ರತಿಭಟನೆ ನಡೆಸಿದರೂ ಇಲಾಖೆ ಮೌನವಾಗಿದ್ದ ಪರಿಣಾಮ ಇಂತಹ ದುರ್ಘಟನೆಗೆ ಕಾರಣವಾಗಿದೆ ಎಂದು ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರ ಆಕ್ರೋಶ ಭರಿತ ಮಾತುಗಳು ಕೇಳಿ ಬರುತ್ತಿವೆ.
ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.