ಮಂಗಳೂರು, ಫೆ 25 (DaijiworldNews/MS): ಸುಳ್ಳು ಸುದ್ದಿ ಹರಡಿ ಸಾಮಾಜಿಕ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮೇಲೆ ಜನವರಿಯಿಂದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹರಿರಾಮ್ ಶಂಕರ್ ಮತ್ತು ಅದರಲ್ಲಿರುವ ಇತರ 7 ಸಿಬ್ಬಂದಿಗಳ ತಂಡ ತೀವ್ರ ನಿಗಾ ವಹಿಸಿದೆ. ಈವರೆಗೆ 1064 ಸಾಮಾಜಿಕ ಜಾಲತಾಣ ಪೇಜ್ ಗಳ ಮೇಲೆ , ವಾಟ್ಸಾಪ್, ಟ್ವಿಟರ್, ಟ್ರೋಲ್ ಖಾತೆಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ .ಶಶಿಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಫೆ. 25 ರ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ್ದು, " ಇಲಾಖೆಯ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ , ಜನವರಿಯಿಂದ ಕಾರ್ಯಾಚರಣೆ ಮಾಡುತ್ತಿದ್ದು ಸಾಮಾಜಿಕ ಜಾಲತಾಣಗಳ ಮೇಲೆ ನಿಕಟ ನಿಗಾ ಇರಿಸಿದೆ . ಡಿಸಿಪಿ ನೇತೃತ್ವದ 7 ಜನರಿರುವ ತಂಡ 2 ತಿಂಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು, 1064 ಖಾತೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗಿದೆ".
"ಸಾರ್ವಜನಿಕರು ತಮ್ಮ ಖಾತೆ ಟ್ರ್ಯಾಕಿಂಗ್ ಆಗಿರುವ ಬಗ್ಗೆ ಆತಂಕ ಪಡಬಾರದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ, ಆಕ್ಷೇಪಾರ್ಹ ಪೋಸ್ಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕಿಡಿಗೇಡಿಗಳ ಖಾತೆಗಳ ಮೇಲೆ ಮಾತ್ರ ನಿಗಾ ಇಡಲಾಗಿದೆ . ಸಾಮಾಜಿಕ ಮಾಧ್ಯಮವು ಪ್ರಬಲ ಅಸ್ತ್ರವಾಗಿದೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿ ಆದರೆ ಅದನ್ನು ದುರುಪಯೋಗಪಡಿಸಬೇಡಿ" ಎಂದು ಆಯುಕ್ತರು ಮನವಿ ಮಾಡಿದ್ದಾರೆ.
ಟ್ರೋಲ್ ಕಿಂಗ್ 193’ ಇನ್ಸ್ಟ್ರಾ ಗ್ರಾಂ ಪೇಜ್ ಆಡ್ಮಿನ್ ಅರೆಸ್ಟ್
ಟ್ರೋಲ್ ಕಿಂಗ್ 193’ ಇನ್ಸ್ಟ್ರಾ ಗ್ರಾಂ ಪೇಜ್ ಮೂಲಕ ಧಾರ್ಮಿಕ ಕೇಂದ್ರಗಳ ಕುರಿತು ಆಕ್ಷೇಪಾರ್ಹ ಪೋಸ್ಟ್ಗಳನ್ನು ಮೇರೆಗೆ ಪೇಜ್ನ ಅಡ್ಮಿನ್, ಕೊಣಾಜೆಯ ನಿವಾಸಿ ಎಸ್ಎಸ್ಎಲ್ಸಿ ಫೇಲ್ ಆಗಿರುವ ಅಪ್ರಾಪ್ತ ವಯಸ್ಕನನ್ನು ಯುವಕನನ್ನು ವಶಕ್ಕೆ ಪಡೆಯಲಾಗಿದೆ. ದೇವಸ್ಥಾನಗಳ ಬಗ್ಗೆ ಮತ್ತು ಇನ್ನೂ ಅನೇಕ ಆಕ್ಷೇಪಾರ್ಹ ಪೋಸ್ಟ್ಗಳನ್ನು ಈ ಪೇಜ್ ಹೊಂದಿದೆ.
ಆರೋಪಿಯ ಬಳಿ ಆಕ್ಷೇಪಾರ್ಹ ಪೋಸ್ಟ್ ಮಾರ್ಫ್ ಮಾಡಲು, ಎಡಿಟ್ ಮಾಡಲು ಬೇಕಾದ ಗ್ಯಾಜೆಟ್ ಗಳು, ಸಾಫ್ಟ್ ವೇರ್ ಗಳಿದ್ದವು. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲನ್ಯಾಯ ಮಂಡಳಿಗೆ ಹಾಜರುಪಡಿಸಲಾಗುವುದು. ಈತ ಬೆಂಗಳೂರಿನಲ್ಲಿ ತರಕಾರಿ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಯಾರಿಂದಲಾದರೂ ಬೆಂಬಲ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿಚಾರಣೆಯ ವೇಳೆ ಈತ ಈ ಪೇಜ್ನಲ್ಲಿ ತಾನೇ ಈ ಪೋಸ್ಟ್ಗಳನ್ನು ಹಾಕಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ
ಆರೋಪಿಗಳ ಹಿಂದೆ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯ ಬೆಂಬಲವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, "ರಾಜಕೀಯ ಪಕ್ಷ ಅಥವಾ ಸಂಘಟನೆಗೆ ಸಂಬಂಧಿಸಿದ ಸಂದೇಶಗಳು, ವೀಡಿಯೊಗಳು, ಚಾಟ್ಗಳನ್ನು ಪೇಜ್ ನಲ್ಲಿದ್ದು ಆದರೆ ಆರೋಪಿಗೆ ಈ ಸಂಘಟನೆ, ರಾಜಕೀಯ ಪಕ್ಷದ ಬೆಂಬಲವಿದೆ " ಎಂದು ಹೇಳಲು ಸಾಧ್ಯವಿಲ್ಲ.
"ಕಾಮೆಂಟ್, ಲೈಕ್ ಮತ್ತು ಶೇರ್ ಮಾಡುವವರು ಸಮಾನ ಅಪರಾಧಿಗಳು, ಕಾನೂನಿನ ಅಜ್ಞಾನಕ್ಕೆ ಕ್ಷಮೆಯಿಲ್ಲ. ಆ್ಯಂಡ್ರಾಯ್ಡ್ ಫೋನ್, ಆಪ್ ಇನ್ಸ್ಟಾಲ್, ಎಡಿಟ್, ಮಾರ್ಫ್ ಹೊಂದಿರುವ ಆರೋಪಿಯನ್ನು ಅಮಾಯಕ ಎಂದು ಹೇಳುವುದು ತಪ್ಪು. ಇಂದಿಗೂ ಅನೇಕ ಜನ ಸಾಮಾನ್ಯರಿಗೆ ಸರ್ಕಾರಿ ಉದ್ಯೋಗ, ಆನ್ಲೈನ್ ಬ್ಯಾಂಕಿಂಗ್ಗೆ ಅರ್ಜಿ ಸಲ್ಲಿಸಲು ತಿಳಿದಿಲ್ಲ. ಆಕ್ಷೇಪಾರ್ಹ ಪೋಸ್ಟ್ನಲ್ಲಿ ಆರೋಪಿಯ ಉದ್ದೇಶಗಳು ಸ್ಪಷ್ಟವಾಗಿವೆ" ಎಂದು ಹೇಳಿದ್ದಾರೆ.
ಮಂಗಳೂರು ಮುಸ್ಲಿಂ ಪೇಜ್ ಫೇಸ್ ಬುಕ್ ಖಾತೆ ಲೈಕ್ ಮಾಡಿದ್ದ ಇಬ್ಬರು ವಶಕ್ಕೆ:
ಮಂಗಳೂರು ಮುಸ್ಲಿಂ ಪೇಜ್ ಫೇಸ್ ಬುಕ್ ಖಾತೆಯಲ್ಲಿ ಹರ್ಷ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದು, ಆ ಪುಟದ ವಿರುದ್ಧ ಸುಮೊಟೊ ಪ್ರಕರಣ ದಾಖಲಾಗಿದೆ. ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಪೋಸ್ಟ್ ಮಾಡಿದ್ದ ಮಂಗಳೂರು ಮುಸ್ಲಿಂ ಎಂಬ ದ ಫೇಸ್ ಬುಕ್ ಖಾತೆಯ ಐಕಾನ್ ಅನ್ನು ಲೈಕ್ ಮಾಡಿದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ
ಮಣಿಪಾಲ ಮೂಲದ ಓರ್ವ ಮತ್ತು ಮುಲ್ಕಿ ಮೂಲದ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಮಂಗಳೂರು ಮುಸ್ಲಿಂ ಎಂಬ ಖಾತೆಯ ಕುರಿತು ತನಿಖೆ ಮುಂದುವರೆದಿದ್ದು, ಮೂಲವನ್ನು ಪತ್ತೆ ಹಚ್ಚಲಾಗುವುದು. 2016ರಲ್ಲಿ ಮಂಗಳೂರು ಮುಸ್ಲಿಂ ಪೇಜ್ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದು, ನ್ಯಾಯಾಲಯದ ಆದೇಶದ ಮೂಲಕ ಪುಟವನ್ನು ನಿರ್ಬಂಧಿಸಲಾಗಿತ್ತು. ಈಗ ಈ ಪುಟದ ವರ್ಣಮಾಲೆಯಲ್ಲಿ ಸ್ವಲ್ಪ ಬದಲಾವಣೆಯಾಗಿದೆ, ಅಲ್ಲಿ ಅವರು ಮಂಗಳೂರು ಪದದಿಂದ "A "ಅನ್ನು ತೆಗೆದುಹಾಕಿದ್ದಾರೆ.
ಮುಸ್ಲಿಂ ಡಿಫೆನ್ಸ್ ಫೋರ್ಸ್' ವಾಟ್ಸಪ್ ಗ್ರೂಪ್ ಟ್ರ್ಯಾಕಿಂಗ್:
40 ಸದಸ್ಯರನ್ನು ಒಳಗೊಂಡ 'ಮುಸ್ಲಿಂ ಡಿಫೆನ್ಸ್ ಫೋರ್ಸ್' ಹೆಸರಿನ ವಾಟ್ಸಾಪ್ ಗುಂಪಿನ ಮೇಲೆ ನಿಗಾ ಇರಿಸಿದೆ, ಈ ಗ್ರೂಪ್ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಮತ್ತು ಅವರ ಪೋಷಕರಿಗೆ ಆಕ್ಷೇಪಾರ್ಹ ಪೋಸ್ಟ್ ಮತ್ತು ಸಂದೇಶಗಳ ಮೂಲಕ ಬೆದರಿಕೆ ಹಾಕುತ್ತಿದ್ದರು.
ಬುರ್ಖಾ ಧರಿಸಿದ ಮುಸ್ಲಿಂ ಹುಡುಗಿಯರು ಮಾಲ್ ಮತ್ತು ಥಿಯೇಟರ್ಗಳಿಗೆ ಸುತ್ತಾಡುವಂತಿಲ್ಲ. ಹೆಣ್ಣುಮಕ್ಕಳ ತಿರುಗಾಡುವುದನ್ನು ಪೋಷಕರು ತಡೆಯಬೇಕು, ಇಲ್ಲದಿದ್ದರೆ ಮಾಲ್ಗಳು ಮತ್ತು ಥಿಯೇಟರ್ಗಳಲ್ಲಿ ಓಡಾಡುವವರನ್ನು ನಾವು ತಡೆಯಬೇಕಾಗುತ್ತದೆ ಎಂದು ವಾಟ್ಸಪ್ ಪೇಜ್ ಹೇಳಿಕೊಂಡಿದೆ.