ಮಂಗಳೂರು, ಫೆ 25 (DaijiworldNews/MS): ಫ್ಲಿಪ್ಕಾರ್ಟ್ನ ಕಸ್ಟಮರ್ ಕೇರ್' ನಂಬರ್ ಎಂದು ನಂಬಿ ವ್ಯಕ್ತಿಯೊಬ್ಬರು ಯಾವುದೇ ನಂಬರ್ಗೆ ಕರೆ ಮಾಡಿ 48,354 ರು. ಕಳೆದುಕೊಂಡಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವ್ಯಕ್ತಿಯೊಬ್ಬರು ಫ್ಲಿಪ್ಕಾರ್ಟ್ನಲ್ಲಿ ಆರ್ಡರ್ ಮಾಡಿದ 'ಕೀ ಬಂಚ್' 12 ದಿನ ಕಳೆದರೂ ಡೆಲಿವರಿಯಾಗದ ಹಿನ್ನಲೆಯಲ್ಲಿ ಗೂಗಲ್ನಲ್ಲಿ ಫ್ಲಿಪ್ಕಾರ್ಟ್ನ ಕಸ್ಟಮರ್ ಕೇರ್ ನಂಬರು ಸರ್ಚ್ ಮಾಡಿದ್ದರು. ಅಲ್ಲಿ ಸಿಕ್ಕಿದ ನಂಬರೊಂದಕ್ಕೆ ನಗರದ ವ್ಯಕ್ತಿ ಕರೆ ಮಾಡಿದ್ದರು. ತಕ್ಷಣ ಕರೆ ಸ್ವೀಕರಿಸದಿದ್ದರೂ ಮತ್ತೆ ಅದೇ ನಂಬರಿನಿಂದ ನಗರದ ವ್ಯಕ್ತಿಗೆ ವಾಪಸ್ ಕರೆ ಬಂದಿತ್ತು ಎನ್ನಲಾಗಿದೆ.
ಹಿಂದಿಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಯು ಆರ್ಡರ್ ಬರುವುದಿಲ್ಲ, ಹಣ ರಿಫಂಡ್ ಮಾಡಲು 'ಎನಿ ಡೆಸ್ಕ್ ಆ್ಯಪ್' ಡೌನ್ಲೋಡ್ ಮಾಡುವಂತೆ ತಿಳಿಸಿದ್ದಾನೆ. ಅದರಂತೆ ನಗರದ ವ್ಯಕ್ತಿಯು ಆ್ಯಪ್ ಇನ್ಸ್ಟಾಲ್ ಮಾಡಿದ್ದಾರೆ. ಬಳಿಕ ಆತನ ಸೂಚನೆಯಂತೆ ಫ್ಲಿಪ್ ಕಾರ್ಟ್ ಆ್ಯಪ್ ತೆರೆದು ಅದರಲ್ಲಿ ಡೆಬಿಟ್ ಕಾರ್ಡ್ ಮತ್ತು ಸಿವಿವಿ ನಂಬರ್ ನಮೂದಿಸಿದ್ದಾರೆ. ತಕ್ಷಣ ಅವರ ಖಾತೆಯಿಂದ 48,354 ರು. ಹಂತ ಹಂತವಾಗಿ ಕಡಿತಗೊಂಡಿದೆ ಎಂದು ಆರೋಪಿಸಲಾಗಿದೆ.
ಹಣ ಕಳೆದುಕೊಂಡ ನಗರದ ವ್ಯಕ್ತಿಯು ಮಂಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.