ಮಂಗಳೂರು, ಫೆ 25 (DaijiworldNews/MS): ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಎದುರಿಸಲಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪರೀಕ್ಷಾ ಪೂರ್ವ ಅಭ್ಯಾಸ ಮಾಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇದ್ರ ಕೆ.ವಿ. ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಇತ್ತೀಚೆಗೆ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳ ಪರಿಶೀಲನೆ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಬೇಕು, ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸಲು ಅವರ ವಾಸಸ್ಥಾನದ ಸಮೀಪವಿರುವ ಸಮುದಾಯ ಭವನ ಅಥವಾ ಗ್ರಾಮ ಪಂಚಾಯತ್ನ ಸಭಾಂಗಣದಲ್ಲಿ ಒಬ್ಬರು ಜವಾಬ್ದಾರಿ ಅಧಿಕಾರಿ ಅಥವಾ ನಿವೃತ್ತ ಶಿಕ್ಷಕರ ನೇತೃತ್ವದಲ್ಲಿ ಹೆಚ್ಚಿನ ಪರೀಕ್ಷಾಭ್ಯಾಸಗಳನ್ನು ಆಯೋಜಿಸುವುದಾದಲ್ಲಿ ಅದಕ್ಕೆ ಸೂಕ್ತ ಅವಕಾಶ ಮಾಡಿ ಕೊಡಲಾಗುವುದು ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಈ ಹಿಂದೆ ಕಳಪೆ ಸಾಧನೆ ಮಾಡಿದ ಶಾಲೆಗಳ ಪಟ್ಟಿ ಹಾಗೂ ಪ್ರಸಕ್ತ ಸಾಲಿನಲ್ಲಿ 10ನೇ ತರಗತಿಯಲ್ಲಿ ಗೈರು ಹಾಜರಾಗುತ್ತಿರುವ ಮಕ್ಕಳ ಶಾಲಾವಾರು ಪಟ್ಟಿ ಒದಗಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಯವರು, ಪ್ರತಿ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವಲಯದಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ ಪೂರಕವಾಗುವ ವಿಶೇಷ ಚಟುವಟಿಕೆಯ ಮೂಲಕ ಅಭ್ಯಾಸ ಮಾಡಲು ಅಥವಾ ಸಾಹಿತ್ಯ ಅಭಿವೃದ್ಧಿ ಪಡಿಸುವುದಾದರೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಬರವಣಿಗೆ ಅಭ್ಯಾಸ ಮಾಡಲು ಬಫರ್ ಶೀಟ್ ಒದಗಿಸಲು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬಫರ್ ಶೀಟ್ ಗಳ ಸಂಖ್ಯೆ ಹಾಗೂ ಅದಕ್ಕೆ ಬೇಕಾಗುವ ಅನುದಾನದ ಮೊತ್ತದ ಬೇಡಿಕೆ ಸಲ್ಲಿಸುವಂತೆಯೂ ಅವರು ಡಿಡಿಪಿಐಗೆ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಧಾಕರ್ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಪುತ್ತೂರು ತಾಲೂಕಿನಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯುವ ಬೇಡಿಕೆಗೆ ಎಸ್.ಎಸ್.ಎಲ್.ಸಿ ಬೋರ್ಡ್ ಒಪ್ಪಿಗೆ ನೀಡಿದೆ, ಇದರಿಂದಾಗಿ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 274 ಖಾಸಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
1.50 ಲಕ್ಷದೊಳಗೆ, 1.50 ರಿಂದ 5 ಲಕ್ಷ ಹಾಗೂ 5 ಲಕ್ಷ ಮೇಲ್ಪಟ್ಟು ದುರಸ್ತಿಗೆ ಅಗತ್ಯವಿರುವ ಶಾಲೆಗಳ ಪಟ್ಟಿಯನ್ನು ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ಪ್ರತಿ ತಾಲೂಕಿನಲ್ಲಿ ಅತ್ಯಂತ ದುರಸ್ತಿಯಲ್ಲಿರುವ 5 ಶಾಲೆಗಳ ವಿವರವಾದ ಮಾಹಿತಿಯನ್ನು ಮಾರ್ಚ್ 2ರೊಳಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲಾ 07 ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿದ್ದರು.