ಮಂಗಳೂರು, ಡಿ15(SS): ಕ್ರಿಸ್ಮಸ್ ಹಬ್ಬಕ್ಕೆ ಇನ್ನೆರಡು ವಾರಗಳು ಬಾಕಿ ಇರುವಂತೆಯೇ ಚರ್ಚ್ಗಳು, ಮನೆಗಳಲ್ಲಿ ಹಬ್ಬದ ಸಡಗರ ಮನೆಮಾಡಿದೆ. ಕೇಕ್ ಮಿಕ್ಸಿಂಗ್, ಶಾಪಿಂಗ್ ಹಾಗೂ ಗೋದಲಿ ತಯಾರಿಯಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ.
ರೋಝಾರಿಯೋ ಕೆಥಡ್ರಲ್, ಮಿಲಾಗ್ರಿಸ್ ಚರ್ಚ್, ಉರ್ವ ಪೊಂಪೈ ಮಾತೆ ಚರ್ಚ್, ಬೋಂದೆಲ್ ಸೈಂಟ್ ಲೋರೆನ್ಸ್, ಬಿಕರ್ಣಕಟ್ಟೆ ಬಾಲಯೇಸು ಚರ್ಚ್, ಕೊರ್ಡೆಲ್ ಚರ್ಚ್ ಕುಲಶೇಖರ ಸೇರಿದಂತೆ ನಗರದೆಲ್ಲೆಡೆ ಹಲವಾರು ಚರ್ಚುಗಳಲ್ಲಿ ಹಬ್ಬದ ಸಡಗರ ಮನೆಮಾಡಿದೆ.
ಕ್ರಿಸ್ಮಸ್ ಕ್ರಿಶ್ಚಿಯನ್ನರ ಪ್ರಮುಖ ಹಬ್ಬ. ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರಿದ ದೇವಪುತ್ರ ಯೇಸುಸ್ವಾಮಿಯ ಜನ್ಮದಿನದ ಆಚರಣೆಯೇ ಕ್ರಿಸ್ಮಸ್. ಮನುಷ್ಯ ಎಲ್ಲರಿಗೂ ಉಪಯುಕ್ತನಾಗಬೇಕು, ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನು ಕೇಳುವಂತವನಾಗಬೇಕು ಎನ್ನುವುದೇ ಈ ಹಬ್ಬದ ಮುಖ್ಯ ಸಂದೇಶ.
ಕ್ರಿಸ್ಮಸ್ ಹಬ್ಬದ ವೇಳೆ ಕ್ರಿಸ್ತನ ಎದುರು ಅವನ ಆರಾಧಕರು ಹಾಡುವ ಕರೋಲ್, ಲಯಬದ್ಧ ಸಂಗೀತದ ಮೂಲಕ ಕ್ರಿಸ್ತನ ಜೀವನಗಾಥೆಯ ಗುಣಗಾನ ಶ್ರೋತೃಗಳ ಕಿವಿಗಳನ್ನು ತಂಪಾಗಿಸುತ್ತವೆ. ಕರೋಲ್ಗಳು ಕ್ರಿಸ್ತನ ಹುಟ್ಟು, ದೇವ ಮಾನವನಾಗಿ ಭೂಮಿಗೆ ಬಂದ ಬಳಿಕ ಅವನ ಜೀವನದಲ್ಲಿ ನಡೆದ ಘಟನಾವಳಿಗಳ ಚರಿತ್ರೆ, ಆತನ ಸಂದೇಶಗಳನ್ನು ವಿವರಿಸುವ ಗೀತೆಗಳು. ಹಾರ್ಮೋನಿಯಂ, ಕಾಂಗೋ, ಝಾಲರಿ, ಕೀಬೋರ್ಡ್ಗಳು ಸೇರಿದಂತೆ ವಿವಿಧ ಸಂಗೀತ ಸಾಧನಗಳ ಸಹಾಯದಿಂದ ಸುಶ್ರಾವ್ಯವಾಗಿ ಹಾಡುತ್ತ ಗಮನ ಸೆಳೆಯುತ್ತವೆ.
ಹಬ್ಬದ ಹಿಂದಿನ ಐದು ದಿನಗಳಲ್ಲಿ ಮನೆ ಮನೆಗೆ ತೆರಳಿ ಹಾಡಲಾಗುತ್ತದೆಯಾದರೂ ಅದಕ್ಕಾಗಿ ತಿಂಗಳಿನಿಂದಲೇ ಅಭ್ಯಾಸ ಆರಂಭಿಸಲಾಗುತ್ತದೆ. ಅಂತೆಯೇ, ಈಗಾಗಲೇ ನಗರದ ಅನೇಕ ಮನೆಗಳಲ್ಲಿ, ಚರ್ಚ್ಗಳಲ್ಲಿ, ಕ್ರೈಸ್ತ ಕಾಲೊನಿಗಳು, ಸಮುದಾಯದ ಸಂಘ ಸಂಸ್ಥೆಗಳಲ್ಲಿ ಹಾಡನ್ನು ಅಭ್ಯಾಸ ಮಾಡಲಾಗುತ್ತಿದೆ. ಅಲ್ಲದೇ, ಅನೇಕ ಸಂಘ ಸಂಸ್ಥೆಗಳಲ್ಲಿ ಕರೋಲ್ ಗಾಯನ ಸ್ಪರ್ಧೆಗಳನ್ನೂ ಆಯೋಜಿಸಿ ಹುರಿದುಂಬಿಸಲಾಗುತ್ತಿದೆ.
ಯೇಸು ಕ್ರಿಸ್ತ ಹುಟ್ಟಿದ ದಿನವನ್ನು ಕ್ರೈಸ್ತರು ಕ್ರಿಸ್ಮಸ್ ಹಬ್ಬವಾಗಿ ಆಚರಿಸುತ್ತಾರೆ. ಡಿ.24ರಂದು ಮಧ್ಯರಾತ್ರಿ ಕ್ರಿಸ್ತ ಹುಟ್ಟಿದ ಎಂಬ ನಂಬಿಕೆಯಿಂದ ಇಡೀ ರಾತ್ರಿ ಚರ್ಚ್, ಮನೆಗಳಲ್ಲಿ ಪ್ರಾರ್ಥನೆ ನಡೆಯುತ್ತದೆ. ಕ್ರಿಸ್ತ ಗೋದಲಿಯಲ್ಲಿ ಜನಿಸಿದ ಎನ್ನುವುದನ್ನು ನೆನಪಿಸಿಕೊಳ್ಳಲು ಹಲವರು ಮನೆ ಮುಂದೆ, ಮನೆಯೊಳಗೆ ಗೋದಲಿ ನಿರ್ಮಾಣ ಮಾಡುತ್ತಾರೆ. ಅದರೊಳಗೆ ಕುರಿ ಮರಿಗಳ ಆಟಿಕೆಗಳನ್ನು ಇಟ್ಟು, ದೀಪಾಲಂಕಾರ ಮಾಡುತ್ತಾರೆ.
ಅಂತೆಯೇ, ಮಂಗಳೂರಿನ ಎಲ್ಲ ಚರ್ಚಿನ ಹೊರಭಾಗದಲ್ಲಿ ಕ್ರಿಬ್ (ಗೋದಲಿ) ಗಳನ್ನು ಆಕರ್ಷಕವಾಗಿ ಸಿದ್ಧಪಡಿಸಲಾಗುತ್ತಿದೆ. ಸುಣ್ಣ ಬಣ್ಣ ಬಳಿದು ಅಲಂಕಾರ ಮಾಡಲಾಗುತ್ತಿದೆ. ನಗರದ ಎಲ್ಲ ಚರ್ಚ್ಗಳು ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.
ಕ್ರಿಸ್ಮಸ್ಗೆ ಇನ್ನೂ ಕೆಲವೇ ಕೆಲವು ದಿನಗಳು ಬಾಕಿ ಇರುವಾಗಲೇ ತರಹೇವಾರಿ ಕೇಕ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ.