ಚಾಮರಾಜನಗರ, ಡಿ 14 :ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಹತ್ತು ಭಕ್ತರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಅಲ್ಲದೆ ಎಸೆದ ಪ್ರಸಾದ ತಿಂದ 60 ಕಾಗೆಗಳು ಕೂಡ ಮೃತಪಟ್ಟಿದೆ.
ಕಿಚ್ಚುಗುತ್ತಿ ಮಾರಮ್ಮ ಕಳಸ ಕೂರಿಸಲು ಗೋಪುರ ಶಂಕುಸ್ಥಾಪನೆ ಸಮಾರಂಭದಲ್ಲಿ ಈ ಅವಘಡ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪ್ರಸಾದದ ರೂಪದಲ್ಲಿ ರೈಸ್ಬಾತ್ ತಯಾರಿ, ಹಾಗೂ ಬಾಳೆಹಣ್ಣು ರಸಾಯನ ವಿತರಿಸಲಾಗಿತ್ತು.ಆದರೆ ಅದನ್ನು ತಿಂದು ಎಲ್ಲರೂ ಅಸ್ವಸ್ಥರಾಗಿದ್ದಾರೆ.
ದೇವಾಲಯದ ಗೋಪುರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ದ್ವೇಷವಿತ್ತು. ಹೀಗಾಗಿ ಒಂದು ಬಣದವರು ಪ್ರಸಾದಕ್ಕೆ ವಿಷಪ್ರಾಶನ ಮಾಡಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರಸಾದವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.