ಮಣಿಪಾಲ, ಫೆ 22 (DaijiworldNews/MS): 'ಕನ್ನಡವನ್ನು ಕಲಿಯಲು ಬಯಸುವವರಿಗೆ ಕನ್ನಡವನ್ನು ಕಲಿಸುವ ಪ್ರಯತ್ನಗಳು ಆಗಬೇಕಿವೆ. ಈ ನಿಟ್ಟಿನಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದ ಭಾಷಾ ವಿಭಾಗವು ಕನ್ನಡ ಭಾಷಾ ಬೋಧನ ಶಾಸ್ತ್ರವನ್ನು ರೂಪಿಸುವ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ' ಎಂದು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ಭಾಷಾ ಅಧ್ಯಯನ ವಿಭಾಗವು ವಿಶ್ವ ಮಾತೃಭಾಷಾ ದಿನದಂದು ಹಮ್ಮಿಕೊಂಡ ದೇಶಭಾಷೆಗಳ ಕುರಿತ ಆನ್ಲೈನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
‘ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ-2022 ನ್ನು ಅನುಷ್ಠಾನ ತರುವುದರ ಮೂಲಕ ಸರ್ವರಿಗೂ ಶಿಕ್ಷಣವನ್ನು ಲಭ್ಯವಾಗಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಇಂಥ ಸಂದರ್ಭದಲ್ಲಿ ಮಾತೃಭಾಷೆಯ ಕಲಿಕೆ ಅತ್ಯಂತ ಮಹತ್ತ್ವದ್ದಾಗಿದೆ’ ಎಂದು ಅವರು ಸಚಿವರು ಹೇಳಿದರು.
ಉದ್ಘಾಟನ ನುಡಿಯಲ್ಲಿ ಮಾಹೆ ಪ್ರೊ ವೈಸ್ ಛಾನ್ಸಲರ್ ಪಿಎಲ್ಎನ್ಜಿ ರಾವ್ ಅವರು, ‘ಪ್ರತಿಯೊಬ್ಬನ ಬದುಕಿನಲ್ಲಿ ಮಾತೃಭಾಷೆಯ ಸ್ಥಾನ ಮಹತ್ತ್ವದ್ದಾಗಿದೆ. ಮಾತೃಭಾಷೆಯನ್ನು ಕಲಿತರೆ ಮಾತ್ರ ಉಳಿದ ಭಾಷೆಗಳಲ್ಲಿ ಪ್ರಾವೀಣ್ಯ ಗಳಿಸಲು ಸಾಧ್ಯ’ ಎಂದರು.
ಮಾಹೆಯ ಸಾಂಸ್ಕೃತಿಕ ಸಮಿತಿ ಮುಖ್ಯಸ್ಥೆ ಡಾ. ಶೋಭಾ ಯು. ಕಾಮತ್ ಅವರು, ‘ಪ್ರಸ್ತುತ ದಿನಗಳಲ್ಲಿ ಆರೋಗ್ಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಭಾಗದ ವಿದ್ಯಾರ್ಥಿಗಳು ಮಾತೃಭಾಷೆ ಮತ್ತು ಬಹುಭಾಷೆಗಳಲ್ಲಿ ವ್ಯವಹರಿಸುವ ಅಗತ್ಯವಿದೆ’ ಎಂದರು.
ಮುಖ್ಯ ಭಾಷಣ ಮಾಡಿದ ದೆಹಲಿಯ ಜವಹರಲಾಲ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಭಾರತದ ಸಂವಿಧಾನದಲ್ಲಿ ಭಾಷೆ, ಉಪಭಾಷೆಗಳ ಸ್ಥಾನಮಾನದ ಕುರಿತು ಮಾತನಾಡಿದರು.
ಕನ್ನಡ ಭಾಷಾಬೋಧನೆಯ ಕುರಿತ ಸಂವಾದದಲ್ಲಿ ಡಚ್-ಕೆನಡಿಯನ್ ಮೂಲದ ಕನ್ನಡ-ಸಂಸ್ಕೃತ ವಿದ್ವಾಂಸ ಡಾ. ರಾಬರ್ಟ್ ಜೆ. ಜೈದೇನ್ಬೋಸ್, ಇಂಡಿಯನ್ ಕನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ನ ಅಧ್ಯಕ್ಷರಾಗಿದ್ದ ಡಾ. ಆರ್. ವಿ. ಎಸ್. ಸುಂದರಂ ಮತ್ತು ದೆಹಲಿಯ ಜವಹರಲಾಲ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಭಾಗವಹಿಸಿದರು. ಪ್ರೊ. ರಾಹುಲ್ ಪುಟ್ಟಿ ಪ್ರಸ್ತಾವನೆ ಮಾಡಿದರು.. ಡಾ. ನೀತಾ ಇನಾಂದಾರ್ ಮತ್ತು ಡಾ. ಪೃಥ್ವೀರಾಜ ಕವತ್ತಾರು ಅವರು ಸಂವಾದದ ಸಮನ್ವಯಕಾರರಾಗಿ ಸಹಕರಿಸಿದರು.
ಆರಂಭದಲ್ಲಿ ಪದ್ಮಶ್ರೀ ಹೊಸಹಳ್ಳಿ ಆರ್. ಕೇಶವ ಮೂರ್ತಿಯವರಿಂದ ಕುಮಾರವ್ಯಾಸ ಭಾರತದ ಆಯ್ದಭಾಗದ ಗಮಕವಾಚನ ಪ್ರಸ್ತುತಿ ನಡೆಯಿತು. ಡಾ. ಕೆ. ಮಹಾಲಿಂಗ ಭಟ್ ಅವರು ತುಳು, ಮಲಯಾಳ ಮತ್ತು ಹವ್ಯಕ ಕನ್ನಡಕ್ಕೆ ಕೃತಿಗಳ ಓದನ್ನು ನಡೆಸಿಕೊಟ್ಟರು. ಪಲ್ಲವಿ ಮಣಿಪಾಲ್ ಅವರು ಲತಾಮಂಗೇಶ್ಕರ್ ಅವರ ದನಿಯನ್ನು ಅನುಸರಿಸಿ ‘ಮಿಲೆ ಸುರ್ ಮೇರಾ ತುಮ್ಹಾರ’ ಹಾಡನ್ನು ಹಾಡುವುದರ ಮೂಲಕ ಬಹುಭಾಷಾ ಭಾರತವನ್ನು ನೆನಪಿಸಿದರು. ಅಮೃತಾ ಯತೀಶ್, ಮೇಘನಾ ಮಂಗಳವೇಢೆ ಮತ್ತು ಆದಿತ್ಯಾ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.