ಬೆಳಗಾವಿ, ಡಿ 14(SM): ರೈತರ ಆತ್ಮಹತ್ಯೆ ಕಡಿಮೆ ಮಾಡಲೆಂದು ರಾಜ್ಯ ಸರ್ಕಾರ ಹೊಸದೊಂದು ನಿರ್ಧಾರಕ್ಕೆ ಬಂದಿದೆ. ಬಡ್ಡಿ ಸಾಲದ ಮೇಲೆ ನಿಯಂತ್ರಣ ಹೇರಲು ಮಂಡಿಸಿದ್ದ ಮಸೂದೆಗೆ ಶುಕ್ರವಾರದಂದು ಸದನದಲ್ಲಿ ಅನುಮೋದನೆ ದೊರೆತಿದೆ.
ಹೊಸ ಕಾಯ್ದೆಯಂತೆ ರೈತರಿಗೆ ಸಾಲ ನೀಡಿ ಬಡ್ಡಿಗೆ ಪೀಡಿಸುವಂತಿಲ್ಲ. ಕೈಸಾಲಕ್ಕೆಂದು ಅಡವಿಟ್ಟುಕೊಂಡ ವಸ್ತುಗಳನ್ನು ಹರಾಜು ಮಾಡುವಂತಿಲ್ಲ. ಆ ವಸ್ತುಗಳನ್ನು ಸ್ವಂತಕ್ಕೆ ಬಳಸಿಕೊಳ್ಳುವುದು ಇತರೆ ಕಾರ್ಯಗಳನ್ನು ಮಾಡುವುದಕ್ಕೆ ಈ ಕಾಯ್ದೆಯು ನಿಷೇಧಿಸುತ್ತದೆ.
ಕೈ ಸಾಲಗಳಿಂದಾಗಿಯೇ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಜ್ಯ ಸರ್ಕಾರವು ಗಮನಿಸಿತ್ತು. ಕೈ ಸಾಲಕ್ಕೆ ಅಧಿಕ ಬಡ್ಡಿಗಳನ್ನು ಹೇರಲಾಗುತ್ತಿತ್ತು. ಚಕ್ರಬಡ್ಡಿಗಳು ಹೇಚ್ಚಾಗುತ್ತಿದ್ದವು. ಒತ್ತೆ ಇಟ್ಟುಕೊಂಡು ಸಾಲ ನೀಡುವುದು, ಸಾಲಗಾರನ ವಸ್ತುಗಳನ್ನು ಹರಾಜು ಹಾಕುವುದು ರಾಜ್ಯದಲ್ಲಿ ನಡೆಯುತ್ತಿತ್ತು. ಇದರಿಂದ ಸಾಕಷ್ಟು ರೈತರು ಸಂಕಟ ಅನುಭವಿಸಿದ್ದಾರೆ. ಹಲವು ಭಾರಿ ರೈತರಿಗೆ ಸಾಲ ನೀಡಿದಾತ ದೌರ್ಜನ್ಯವನ್ನು ಕೂಡ ಮಾಡುತ್ತಿದ್ದ ಉದಾಹರಣೆಗಳು ಸಾಕಷ್ಟಿವೆ.
ಈಗಾಗಲೇ ಬಡ್ಡಿ ಪಾವತಿ ಮಾಡಲಾಗದೆ ನ್ಯಾಯಾಲಯಕ್ಕೆ ಹೋಗಿರುವ ಎಲ್ಲಾ ಹರಾಜುಗಳು ರದ್ದಾಗಲಿವೆ. ಭೂಮಿ ಅಡವಿಟ್ಟುಕೊಂಡು ಸಾಲ ನೀಡಿದ್ದಲ್ಲಿ, ಜಮೀನನ್ನು ಮಾರುವಂತೆ ಅಥವಾ ಹರಾಜು ಮಾಡುವಂತಿಲ್ಲ ಅದು ಮತ್ತೆ ರೈತನಿಗೆ ಸೇರುತ್ತದೆ.
ಇನ್ನು ಸಾಲ ನೀಡಿದಾತ ರೈತನಿಗೆ ತೊಂದರೆ ನೀಡಿದರೆ ಆತನಿಗೆ ಶಿಕ್ಷೆಯಂತು ಕಟ್ಟಿಟ್ಟ ಬುತ್ತಿಯಾಗಿದೆ. ಸಾಲ ಪಡೆದ ವ್ಯಕ್ತಿಯನ್ನು ಬಡ್ಡಿಗಾಗಿ ಪೀಡಿಸಿದರೆ 3 ವರ್ಷ ಜೈಲು ಶಿಕ್ಷೆ, ಮತ್ತು 30 ಸಾವಿರ ದಂಡ ವಿಧಿಸಲಾಗುತ್ತದೆ. ರೈತರನ್ನು ಆತ್ಮಹತ್ಯೆಯಿಂದ ಪಾರುಪಾಡಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಆ ಮೂಲಕ ರೈತರ ಮೊಗದಲ್ಲಿ ಹರ್ಷವನ್ನುಂಟು ಮಾಡಲು ಸರಕಾರ ಮುಂದಾಗಿದೆ.