ನವದೆಹಲಿ,ಡಿ 14 (MSP): ಔಷಧಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುವುದನ್ನು ನಿಷೇಧಿಸಿ ದೆಹಲಿ ಹೈಕೋರ್ಟ್ ಆದೇಶಿಸಿದ್ದು, ತಕ್ಷಣದಿಂದಲೇ ಇದನ್ನು ದೇಶಾದ್ಯಂತ ಜಾರಿಗೆ ತರಲು ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸರಿಯಾದ ನಿಯಮಾವಳಿಗಳು ಇಲ್ಲದೆ, ವೈದ್ಯರ ಶಿಫಾರಸು ಚೀಟಿಯಿಲ್ಲದೆ ಆನ್ ಲೈನ್ ಮೂಲಕ ಔಷಧ ಮಾರಾಟ ಮಾಡಲಾಗುತ್ತದೆ. ಆನ್ ಲೈನ್ ಮೂಲಕ ಔಷಧ ಮಾರಾಟದ ಉದ್ದೇಶ ಕೇವಲ ಲಾಭ ಗಳಿಸುವುದು ಮಾತ್ರ ಆಗಿರುತ್ತದೆ. ಇದರ ಪರಿಣಾಮ ಅನೇಕ ಜನರ ಆರೋಗ್ಯ ಸ್ಥಿತಿ ಹದಗೆಡುತ್ತದೆ. ಅಲ್ಲದೆ ಇದರ ಪರಿಣಾಮದಿಂದ ನಂತರ ವೈದ್ಯರಿಗೆ ಚಿಕಿತ್ಸೆ ನೀಡುವುದು ಕೂಡಾ ಸವಾಲಿನ ಕೆಲಸ ಆಗಿರುತ್ತದೆ ಎಂದು ದೆಹಲಿ ಮೂಲದ ಚರ್ಮರೋಗ ತಜ್ಞ ಜಹೀರ್ ಅಹ್ಮದ್ ಪಿಐಎಲ್ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಜೆ ರಾಜೇಂದ್ರ ಮೆನನ್, ನ್ಯಾ. ವಿ.ಕೆ. ರಾವ್ ಅವರಿದ್ದ ಪೀಠ, ಮಾರಾಟ ನಿಯಂತ್ರಣಕ್ಕೆ ನಿಯಮ ರೂಪಿಸಿ ಎಂದು ಸರ್ಕಾರಗಳಿಗೆ ಸೂಚಿಸಿದೆ.
ಅನ್ಲೈನ್ ಔಷಧ ಮಾರಾಟಗಾರರು ಔಷಧ ಮಾರಾಟ ನಿಯಂತ್ರಣ ಆಯೋಗದಿಂದ ಪರವಾನಿಗೆ ಹೊಂದಿರುವುದಿಲ್ಲ. ವೈದ್ಯರ ಶಿಫಾರಸು ಚೀಟಿ ಇಲ್ಲದೆ ಆನ್ ಲೈನ್ ಮೂಲಕ ಔಷಧ ಪಡೆದು ರೋಗಿ ಸ್ವಯಂ ಚಿಕಿತ್ಸೆಗೆ ಮುಂದಾದರೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಆನ್ ಲೈನ್ ಔಷದ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.