ನವದೆಹಲಿ,ಡಿ 14 (MSP): ಬರಬೇಕಿದ್ದ “ಕಮಿಷನ್” ಇತ್ಯರ್ಥವಾಗಿಲ್ಲದ ಕಾರಣ ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತದ ಅವಧಿಯಲ್ಲಿ ರಫೇಲ್ ಡೀಲ್ ಅನ್ನು ಅಂತಿಮಗೊಳಿಸಿರಲಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸಿಗರು ಯಾವ ಆಧಾರದ ಮೇಲೆ ರಫೇಲ್ ಡೀಲ್ ಬಗ್ಗೆ ಆರೋಪ ಮಾಡಿದ್ದರು ?, ರಫೇಲ್ ಡೀಲ್ ವಿಚಾರದಲ್ಲಿ ದೇಶದ ಜನರ ದಿಕ್ಕು ತಪ್ಪಿಸಲು ರಾಹುಲ್ ಗಾಂಧಿಗೆ ಹೇಳಿಕೊಟ್ಟವರು ಯಾರು? ಸುಳ್ಳು ಆರೋಪಗಳನ್ನು ಮಾಡಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆಯಾಚಿಸಲಿ ಎಂದು ಶಾ ಅಗ್ರಹಿಸಿದ್ದಾರೆ.
ಅವರು ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿದ ನಂತರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ , ಸುಪ್ರೀಂ ತೀರ್ಪು ನಿಜಕ್ಕೂ ಸ್ವಾಗತಾರ್ಹ. ಸತ್ಯಕ್ಕೆ ಎಂದಿಗೂ ಜಯವಿದೆ. ನ್ಯಾಯಾಲಯದ ಆದೇಶ ರಫೇಲ್ ಒಪ್ಪಂದದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ಆದರೆ ದೇಶದ ಹಳೆಯ ಪಕ್ಷ ಕಾಂಗ್ರೆಸ್ ಜನರನ್ನು ರಫೇಲ್ ಡೀಲ್ ವಿಚಾರದಲ್ಲಿ ತಪ್ಪು ದಾರಿಗೆ ಎಳೆದಿತ್ತು. ಆಧಾರ ರಹಿತವಾಗಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದ ರಾಹುಲ್ ಗಾಂಧಿಯವರು ಭೇಷರತ್ ಕ್ಷಮೆಯಾಚಿಸಲಿ ಎಂದು ಒತ್ತಾಯಿಸಿದರು.
ದೇಶದ ಭದ್ರತೆ ವಿಚಾರದಲ್ಲಿ ಧಕ್ಕೆ ತರಲು ಕಾಂಗ್ರೆಸ್ ಯತ್ನಿಸಿದ್ದು, ರಫೇಲ್ ಖರೀದಿಗೆ ಸಂಬಂಧಿಸಿದಂತೆ ಸಂಸತ್ ನಲ್ಲಿ ಚರ್ಚೆ ನಡೆಸಲು ನಾವು ಸಿದ್ಧರಾಗಿದ್ದೇವೆ ಎಂದರು.