ಉಡುಪಿ, ಡಿ 14 (MSP): ಅದಮಾರು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಹೇರ್ ಕಟ್ ವಿಚಾರವಾಗಿ, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳೀಯ ಮಧ್ಯೆ ವಾಗ್ವಾದ ನಡೆದಿದ್ದು, ಶುಕ್ರವಾರ ಶಾಲೆಯ ಸುಮಾರು 15-20 ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟಸಿದ ಘಟನೆ ನಡೆದಿದೆ.
ಇಲ್ಲಿ ಅಭ್ಯಾಸಿಸುವ ವಿದ್ಯಾರ್ಥಿಗಳಿಗೆ ಕೂದಲನ್ನು ಪೂರ್ಣಪ್ರಜ್ಞ ಶಾಲಾ ನಿಯಮದಂತೆ ಶಿಸ್ತು ಬದ್ದವಾಗಿ ಕತ್ತರಿಸಬೇಕೆಂಬ ನಿಯಮವಿದೆ. ಆದರೆ ವಿದ್ಯಾರ್ಥಿಗಳು ನಿಯಮ ಮೀರಿ, ಸ್ಟೈಲಿಶ್ ಆಗಿ ಕೇಶ ವಿನ್ಯಾಸ ಮಾಡಿದ್ದರು. ಇದಕ್ಕೂ ಮುಂಚೆ ಹಲವಾರು ವಿದ್ಯಾರ್ಥಿಗಳ ಪಾಲಕರು ಕೂಡಾ ಆಡಳಿತ ಕಚೇರಿಗೆ ಕರೆ ಮಾಡಿ, ಮಕ್ಕಳು ನಮ್ಮ ಮಾತನ್ನು ಕೇಳುತ್ತಿಲ್ಲ. ಕಾಲೇಜು ಸೂಚನೆ ನೀಡಿದರೆ ಮಾತ್ರ ಸರಿಯಾಗಿ ಕೂದಲು ಕಟ್ ಮಾಡುತ್ತಾರೆ ಎಂದಿದ್ದರು. ಅಲ್ಲದೆ ಕಳೆದ ವಾರ ಶಾಲಾ ವಾರ್ಷಿಕೋತ್ಸವದ ದಿನವೂ ಪಾಲಕರು ಈ ಬಗ್ಗೆ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಶಾಲಾ ಆಡಳಿತ ಮಂಡಳಿ ಕಠಿಣ ಕ್ರಮ ಕೈಗೊಂಡು ಮೊದಲಿಗೆ ಹಾಸ್ಟೆಲ್ನಲ್ಲಿ ವಾಸವಿರುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡಿದ್ದರು. ಇದೇ ಸಂದರ್ಭ ಶಾಲಾ ಎಸೆಂಬ್ಲಿ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಮೌಖಿಕವಾಗಿ ಲಿಖಿತವಾಗಿ ನೋಟಿಸು ನೀಡಲಾಗಿತ್ತು. ಆದರೆ ಕೆಲವು ವಿದ್ಯಾರ್ಥಿಗಳು ಆಡಳಿತ ಮಂಡಳಿಯ ಆದೇಶವನ್ನು ಧಿಕ್ಕರಿಸಿ, ಶಾಲೆಯಿಂದ ಹೊರಗೆ ಉಳಿದಿದ್ದರು. ಈ ಕಾರಣದಿಂದ ಆಡಳಿತ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ.
ಕಳೆದ ಬುಧವಾರದಂದು ಕೆಲ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದು ಪ್ರತಿಭಟನೆ ನಡೆಸಲು ಸನ್ನದ್ಧರಾಗಿದ್ದರು. ಆದರೆ ಮತ್ತೆ ಅವರು ಕ್ಲಾಸಿಗೆ ತೆರಳಿದ್ದರು. ಶುಕ್ರವಾರ ಹಲವಾರು ಸಂಘಟನೆಗಳು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು ಕ್ಲಾಸಿನಿಂದ ಹೊರಗುಳಿದಿದ್ದರು. ಬೆಳಗ್ಗೆಯೇ ಪಡುಬಿದ್ರಿ ಪೊಲೀಸರು ಸ್ಥಳದಲ್ಲಿ ಮೊಕ್ಕಂ ಹೂಡಿದ್ದು, ಕ್ಯಾಂಪಸ್ ಹೊರಗಡೆ ರಸ್ತೆಯಲ್ಲಿ ನಿಂತಿದ್ದ ವಿದ್ಯಾರ್ಥಿಗಳನ್ನ ಅಲ್ಲಿಂದ ಚದುರಿಸಿ ತರಗತಿಗೆ ಕಳುಹಿಸುವ ಪ್ರಯತ್ನ ನಡೆಸಿದರು. ಇದೇ ಸಮಯ ವಿದ್ಯಾರ್ಥಿಗಳಿಗೆ ಬೆಂಬಲಾರ್ಧವಾಗಿ ಕೆಲವು ಯುವಕರು ಸ್ಥಳಕ್ಕೆ ಆಗಮಿಸಿದ್ದು, ಅವರನ್ನು ಪೊಲೀಸರು ಒತ್ತಾಯ ಪೂರ್ವಕವಾಗಿ ಅಲ್ಲಿಂದ ತೆರವು ಗೊಳಿಸಿದ್ದಾರೆ.
ಆಡಳಿತ ಮಂಡಳೀಯವರು ಮಾಧ್ಯಮದ ಜೊತೆ ಮಾತನಾಡಲು ನಿರಾಕರಿಸಿದ್ದು, ನಾವು ನಮ್ಮ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಡಳಿತ ಮಂಡಳಿ ಜೊತೆ ಮಾತನಾಡಿ ಪರಿಹಾರ ಕಂಡು ಕೊಳ್ಳುತ್ತೇವೆ. ಎಲ್ಲಾ ವಿದ್ಯಾರ್ಥಿಗಳಿಗೂ ನಾವು ನಮ್ಮ ಶಾಲೆಯ ನಿಬಂಧನೆಯನ್ನು ಮನವರಿಕೆ ಮಾಡುತ್ತೇವೆ. ಇದು ಅಂತಹಾ ದೊಡ್ಡ ಸಮಸ್ಯೆ ಅಲ್ಲ ಎಂದಿದ್ದಾರೆ.