ಉಡುಪಿ, ಫೆ 20 (DaijiworldNews/HR): ನ್ಯಾಯಾಲಯದ ಆದೇಶ ವಿರೋಧಿಸಲು ಕಾಂಗ್ರೆಸ್ ಪ್ರೇರೇಪಣೆ ಕೊಡುತ್ತಿದ್ದು, ನ್ಯಾಯಾಲಯ ಆದೇಶ ಉಲ್ಲಂಘನೆ ಚರ್ಚೆಗಳಾಗುತ್ತಿವೆ. ಇಂತಹ ಚರ್ಚೆಗಳಿಗೆ ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯರು ಅವಕಾಶ ಕೊಡಬಾರದು ಎಂದು ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಸ್ಲಿಂ ಮಹಿಳೆಯರು ನನ್ನ ತಂಗಿಯರು ಎಂದು ತ್ರಿವಳಿ ತಲಾಕ್ ರದ್ಧು ಮಾಡಲಾಯ್ತು. ಇದನ್ನು ಹಿಜಾಬ್ ಹೋರಾಟ ಮಾಡುತ್ತಿರುವವರು ಅರ್ಥಮಾಡಿಕೊಳ್ಳಬೇಕು. ವರ್ಗ ಸಂಘರ್ಷಕ್ಕೆ ಪ್ರೇರಣೆ ಕೊಡುವವರ ಮಾತು ಕೇಳಬೇಡಿ. ವೋಟಿಗಾಗಿ ಧರ್ಮಕ್ಕಾಗಿ ಪ್ರೇರೇಪಣೆ ಕೊಡುವವರ ಬಗ್ಗೆ ಕಿವಿಗೊಡಬೇಡಿ. ಧರ್ಮಾಂಧತೆಗೆ ಉತ್ತೇಜನ ಕೊಡುವ ಪ್ರಕ್ರಿಯೆ ನಿಲ್ಲಬೇಕು. ಸಮವಸ್ತ್ರ ಅಂದರೆ ಸಮಾನತೆಯ ಸಂಕೇತ ಎಂದಿದ್ದಾರೆ.
ಇನ್ನು ಬುರ್ಖಾ ಮತ್ತು ಹಿಜಾಬ್ ಎಂಬ ಸಂವಿಧಾನಾತ್ಮಕ ವಿಚಾರವನ್ನು ಯಾರು ಪ್ರಶ್ನೆ ಮಾಡಿಲ್ಲ. ಕಾನೂನನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು. ಎಳೆಯ ಮಕ್ಕಳು ಶಿಕ್ಷಣ ಕಲಿಯಲು ಶಾಲಾ-ಕಾಲೇಜಿಗೆ ಬರುತ್ತಾರೆ. ಸರಕಾರದ ಆದೇಶ, ಕೋರ್ಟ್ ಮಧ್ಯಂತರ ತೀರ್ಪು ಸ್ಪಷ್ಟವಾಗಿದೆ. ಮುಂದಿನ ಆದೇಶದವರೆಗೆ ಸಮವಸ್ತ್ರ ಮಾತ್ರ ಎಂದು ಕೋರ್ಟ್ ಹೇಳಿದ್ದು, ನ್ಯಾಯಾಲಯ ಹೇಳಿದ ನಂತರ ಕೇಸರಿ ಸಾಲುಗಳು ಕಾಣಿಸಿಕೊಂಡಿಲ್ಲ. ಕೇಸರಿ ಶಾಲು ಪೇಟ ತೆಗೆದು ಒಂದು ವರ್ಗ ಕೋರ್ಟ್ ನಿಯಮದಂತೆ ಕಾಲೇಜುಗೆ ಹೋಗುತ್ತಿದ್ದಾರೆ ಎಂದರು.
ಹಿಜಬ್ ಹಾಕಿದ ಮಕ್ಕಳು ನಾವೆಲ್ಲ ಒಂದು ಎಂಬ ಭಾವನೆ ಹೊಂದಿದ್ದಾರೆ. ವಿದ್ಯಾರ್ಥಿನಿಯರು ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಸೇರಿದಂತೆ ಕೆಲ ಶಕ್ತಿಗಳು ಹಿಜಾಬ್ ವೈಭವೀಕರಿಸುತ್ತಿರುವುದು ದುರಾದೃಷ್ಟ. ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದಲ್ಲಿ ಒಟ್ಟಾಗಿ ಒಂದಾಗಿ ಬದುಕುವ ಸಂದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.