ಮಂಗಳೂರು, ಫೆ 20 (DaijiworldNews/KP): ಕಳೆದ 13 ದಿನಗಳಿಂದ ದಿನದ 24 ಗಂಟೆಯೂ ಯಾವುದೇ ವಿರಾಮವಿಲ್ಲದೆ ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಆಸೀಫ್ ಆಪತ್ಬಾಂಧವ ಅವರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಆಪತ್ಬಾಂಧವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದ್ದು, ಹಲವು ಸಾರ್ವಜನಿಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಆಸಿಪ್ ಅವರೊಂದಿಗೆ ಕೆಲ ಸಮಯಗಳನ್ನು ಕಳೆದು ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ.
ಈ ಕುರಿತಂತೆ ದಾಯ್ಜಿವಲ್ಡ್ನೊಂದಿಗೆ ಮಾತನಾಡಿದ ಅವರು, ಇದು ಅನಿರ್ದಿಷ್ಟಾವಧಿ ಪ್ರತಿಭಟನೆಯಾಗಿದ್ದು, ಜಿಲ್ಲಾಧಿಕಾರಿ ಇಲ್ಲಿಗೆ ಬಂದು ಜನರನ್ನು ಲೂಟಿ ಮಾಡುತ್ತಿರುವ ಟೋಲ್ ಗೇಟ್ ಅನ್ನು ನೆಲಸಮಗೊಳಿಸುವುದಾಗಿ ಭರವಸೆ ನೀಡುವವರೆಗೂ ಈ ಪ್ರತಿಭಟನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದರು.
ಇನ್ನು ಎರಡು ಟೋಲ್ ಗೇಟ್ಗಳ ಅಂತರವು 60 ಕಿಲೋಮೀಟರ್ಗಳಾಗಿರಬೇಕು ಎಂದು ಎನ್ಎಚ್ಎಐ ಮಾರ್ಗಸೂಚಿಯಲ್ಲಿ ತಿಳಿಸಿದೆ, ಆದರೆ ಸುರತ್ಕಲ್ ಮತ್ತು ಹೆಜಮಾಡಿ ಟೋಲ್ ಗೇಟ್ಗಳ ನಡುವಿನ ಅಂತರವು 15 ಕಿಲೋಮೀಟರ್ಗಿಂತ ಕಡಿಮೆಯಿದೆ, ಅದ್ದರಿಂದ ಅಧಿಕಾರಿಗಳು ಸಾರ್ವಜನಿಕರ ಹಣವನ್ನು ಲೂಟಿ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಅಲ್ಲದೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯಾವುದೇ ಟೋಲ್ ಗೇಟ್ ಇರಬಾರದು ಎಂದು ಅವರು ಹೇಳಿದರು.
ಇನ್ನು ತಮ್ಮ ವಿಶಿಷ್ಟ ರೀತಿಯ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, ಸಾರ್ವಜನಿಕರ ಗಮನ ಸೆಳೆಯಲು ಹಾಗೂ ಸಮಾಜಕ್ಕೆ ಸಂದೇಶ ತಲುಪಿಸುವ ನಿಟ್ಟಿನಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾನೆ, ರಾಜಕೀಯವೆಂದರೆ ಕೊಳಕು, ಜನರ ಏಳಿಗೆ ಬೇಕಾಗಿಲ್ಲ ಇದರ ದ್ಯೋತಕವಾಗಿ ಕೆಸರು ನೀರಿನಲ್ಲಿ ಕುಳಿತು ಪ್ರತಿಭಟನೆ ಹಾಗೂ ಅಧಿಕಾರಿಗಳು ಜನರಿಗೆ ಆಗುತ್ತಿರುವ ಅನ್ಯಾಯವನ್ನು ಕಂಡು ಕೂಡ ಸುಮ್ಮನಿದ್ದಾರೆಂದು ತೋರಿಸಲು ಶವದ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದೇನೆ ಎಂದರು.
ಅಲ್ಲದೆ ನ್ಯಾಯಕ್ಕೆ ಸಂಕೋಲೆ ಹಾಕಿದ್ದಾರೆ ಎಂದು ಸಾರ್ವಜನಿಕರಿಗೆ ತೋರಿಸಲು ತಾನನ್ನು ತಾನೇ ಕಟ್ಟಿಕೊಂಡಿದ್ದೇನೆ ಹಾಗೂ ಸಾಮಾನ್ಯ ಮನುಷ್ಯನ ಲೂಟಿ ಮಾಡುವ ಬದಲು ಶೂ ಪಾಲಿಶ್ ಮಾಡಿ ಶಾಂತಿಯುತ ಜೀವನ ನಡೆಸಬಹುದು ಎಂದು ತೋರಿಸಲು ಶೂ ಪಾಲಿಶ್ ಕೂಡ ಮಾಡಿದ್ದೇನೆ ಎಂದು ಆಸೀಪ್ ಹೇಳಿದರು.
ಇನ್ನು ಇತ್ತೀಚೆಗೆ ಅವರ ಮೇಲೆ ಮಂಗಳಮುಖಿಯರು ಹಲ್ಲೆ ಯತ್ನದ ಕುರಿತು ಮಾತನಾಡಿದ ಅವರು, ಕೆಲ ಮಂಗಳಮುಖಿಯರು ಸಾರ್ವಜನಿಕರನ್ನು ಲೂಟಿ ಮಾಡುತ್ತಿದ್ದಾರೆ, ಅಲ್ಲದೆ ಅವರು ಹನಿ ಟ್ರ್ಯಾಪಿಂಗ್ನಲ್ಲಿ ತೊಡಗಿದ್ದಾರೆ. ಆದರೆ ನನ್ನ ಹೋರಾಟವು ಇಂತಹ ಸಮಸ್ಯೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಅಲ್ಲದೆ ಇತ್ತೀಚೆಗೆ ಪ್ರತಿಭಟನೆಯ ವೇಳೆ ಆಸಿಫ್ ಆರೋಗ್ಯ ಹದಗೆಟ್ಟಿತ್ತು ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಿದ ಅವರು, ನನ್ನ ಆರೋಗ್ಯ ಸರಿಯಿಲ್ಲದಿದ್ದರೂ, ನಾನು ಶಾಂತಿಯುತವಾಗಿ ಪ್ರತಿಭಟನೆಯನ್ನು ಮುಂದುವರಿಸುತ್ತೇನೆ. ಅಲ್ಲದೆ ನಾನು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯಲ್ಲಿ ಇಲ್ಲ, ಇನ್ನು ಮುಂದೆ ನಾನು ರಾಜಕೀಯಕ್ಕೆ ಸೇರುವುದಿಲ್ಲ. ನಾನು ಸಾರ್ವಜನಿಕ ಹಿತಾಸಕ್ತಿಗಾಗಿ ಒಳ್ಳೆಯ ಉದ್ದೇಶಕ್ಕಾಗಿ ಇದನ್ನು ಮಾಡುತ್ತಿದ್ದೇನೆ. ಎಂದರು
ಅಲ್ಲದೆ ಸಾರ್ವಜನಿಕರು ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.