ಕಾಸರಗೋಡು, ಅ 19: ತಾಯಿ ಹಾಗೂ ಏಳು ತಿಂಗಳ ಶಿಶುವಿನ ಮೃತದೇಹ ಕೆರೆಯಲ್ಲಿ ಪತ್ತೆ ಯಾದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಬಾಡೂರಿನಲ್ಲಿ ನಡೆದಿದೆ. ಬಾಡೂರು ಬಾರೆಬೆಟ್ಟುವಿನ ಪದ್ಮನಾಭ ರೈ ರವರ ಪತ್ನಿ ಶ್ರುತಿ ( 28 ) ಮತ್ತು ಏಳು ತಿಂಗಳ ಮಗು ಆಯುಷ್ ಮೃತಪಟ್ಟ ವರು. ಮಂಗಳವಾರ ರಾತ್ರಿ ಶ್ರುತಿ ಊಟ ಮಾಡಿ ಮಲಗಿದ್ದು, ಮುಂಜಾನೆ ನೋಡಿದಾಗ ನಾಪತ್ತೆಯಾಗಿದ್ದರು. ಈ ಹಿನ್ನಲೆಯಲ್ಲಿ ಹುಡುಕಾಡಿದಾಗ ಮನೆ ಸಮೀಪದ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿಯದಿದ್ದರೂ ಮಗು ಆಯುಷ್ ಗೆ ಹೃದಯ ಸಂಬಂಧಿ ಕಾಯಿಲೆ ಇದ್ದು ಚಿಕಿತ್ಸೆ ನಡೆಸಲಾಗುತ್ತಿತ್ತು. ಹುಟ್ಟಿನಿಂದಲೇ ಮಗುವಿಗೆ ಖಾಯಿಲೆ ಕಂಡು ಬಂದಿತ್ತು ಎನ್ನಲಾಗಿದೆ. ಇದರಿಂದ ತಾಯಿ ಶ್ರುತಿ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಶ್ರುತಿ ಯವರ ಪತಿ ಪದ್ಮನಾಭ ಹಡಗಿನಲ್ಲಿ ಉದ್ಯೋಗಿಯಾಗಿದ್ದು , ಎರಡು ವರ್ಷಗಳ ಹಿಂದೆ ವಿವಾಹವಾಗಿತ್ತು . ಐದು ತಿಂಗಳ ಹಿಂದೆಯಷ್ಟೇ ಊರಿಗೆ ಬೇಟಿ ನೀಡಿ ತೆರಳಿದ್ದರು ಎನ್ನಲಾಗಿದೆ. ಘಟನೆ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.