ಮಂಗಳೂರು, ಫೆ 20 (DaijiworldNews/KP): 2008ರ ಅಹಮ್ಮದಾಬಾದ್ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೆ ಒಳಗಾಗಿರುವ 38 ಮಂದಿ ಅಪರಾಧಿಗಳ ಪೈಕಿ ಮೂವರು ಕರ್ನಾಟಕದವರಾಗಿದ್ದು, ಅದರಲ್ಲೂ ಇಬ್ಬರು ಮಂಗಳೂರು ಮೂಲದವರಾಗಿದ್ದಾರೆ.
ಇನ್ನು ಶಿಕ್ಷೆಗೊಳಗಾದ ಅಪರಾಧಿಗಳನ್ನು ಹಳೆಯಂಗಡಿಯ ಅಹ್ಮದ್ ಬಾವಾ ಅಬೂಬಕರ್ (38), ಮಂಗಳೂರಿನ ಪಾಂಡೇಶ್ವರದ ಸುಭಾಸ್ನಗರದ ಸೈಯದ್ ಮೊಹಮದ್ ನೌಶಾದ್ (30), ಹಾಗೂ ವಿಜಯಪುರದ ಮಹಮದ್ ಅದಾನ್ ಎಂಬ ಮಾಹಿತಿ ದೊರಕಿದೆ.
ಅಲ್ಲದೆ ಅಪರಾಧಿಗಳಾದ ಸೈಯದ್ನಿಗೆ ಜೀವನ ಪರ್ಯಂತ ಜೈಲು ಶಿಕ್ಷೆ ಹಾಗೂ ಅಹ್ಮದ್ ಬಾವಾ ಮತ್ತು ಮಹಮದ್ಗೆ ವಿಶೇಷ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಇನ್ನು ಈ ಅಪರಾಧಿಗಳೆಲ್ಲ ಉಡುಪಿಯಿಂದ ಸ್ಫೋಟಕವನ್ನು ಖರೀದಿಸಿ ಅದನ್ನು ಗುಜರಾತಿನ ಸೂರತ್ಗೆ ತೆಗೆದುಕೊಂಡು ಹೋಗುತಿದ್ದರು, ಅಲ್ಲದೆ ಗುಜರಾತ್ನಲ್ಲಿ ಬಾಂಬ್ ತಯಾರಿಸುವುದಕ್ಕಾಗಿ ಇವರೆಲ್ಲ ಒಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಆ ಬಾಡಿಗೆ ಮನೆಯಲ್ಲಿ ಬಾಂಬ್ ತಯಾರು ಮಾಡಿ ಬಳಿಕ ಅವುಗಳನ್ನು ಸೂರತ್ ಮತ್ತು ಅಹ್ಮದಾಬಾದ್ನ ವಿವಿಧೆಡೆಗಳಲ್ಲಿ ಇರಿಸಿ, ಪೂನಾ ಕಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು, ಆದರೆ ರೈಲು ಅಹ್ಮದಾಬಾದ್ನ ಅರ್ಧ ದಾರಿಗೆ ತಲುಪಿದಾಗ ಬಾಂಬ್ ಸ್ಫೋಟಗೊಂಡಿರುವ ಮಾಹಿತಿ ದೊರಕಿತ್ತು.
ಇನ್ನು ಅಪರಾಧಿಗಳು ಸೂರತ್ನಲ್ಲು ಬಾಂಬ್ ಇರಿಸಿದ್ದರು, ಆದರೆ ಬಾಂಬ್ಗೆ ಸರ್ಕ್ಯೂಟ್ ಜೋಡಣೆ ಸರಿಯಾಗದೆ ಸ್ಫೋಟಗೊಂಡಿರಲಿಲ್ಲ..
ಕಾರಿನಿಂದ ಅಪರಾಧಿಗಳ ಬಗ್ಗೆ ಮಾಹಿತಿ ಲಭ್ಯ:
ಅಪರಾಧಿಗಳೆಲ್ಲ ಸೂರತ್ ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು, ಇವರಿಗೆ ಬಾಡಿಗೆ ನೀಡಿದ್ದ ಮಾಲಕ ಕಾರನ್ನು ಗುರುತು ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅಪರಾಧಿಗಳು ಬಾಡಿಗೆ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದರು.
ನಂತರ ಪೊಲೀಸರು ಬಂದು ಮನೆಯ ಬಾಗಿಲು ತೆಗೆದು ಪರಿಶೀಲಿಸಿದಾಗ ಬಾಂಬ್ ತಯಾರಿಕೆಯ ವಸ್ತುಗಳು ಲಭ್ಯವಾಗಿತ್ತು. ಅಲ್ಲದೆ ಅಪರಾಧಿಗಳು ಕಾರನ್ನು ಮುಂಬೈಯಿಂದ ಕದ್ದು ತಂದಿದ್ದಾರೆ ಎಂಬ ಮಾಹಿತಿ ದೊರಕಿತ್ತು.
ಅಪರಾಧಿಗಳು ಉಳ್ಳಾಲದಲ್ಲಿ ತಲೆಮರೆಸಿಕೊಂಡಿದ್ದರು:
ಇಸ್ಮಾಯಿಲ್ ಚೌಧುರಿ ಎಂಬಾತ ಕಾರನ್ನು ಮುಂಬೈನಿಂದ ಕದ್ದು ತಂದು ರಿಯಾಝ್ ಭಟ್ಕಳ್ನಿಗೆ ನೀಡಿದ್ದನು, ಅಲ್ಲದೆ ಇದೆ ವೇಳೆ ರಿಯಾಜ್ ಉಳ್ಳಾಲದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿಯೂ ಪೊಲೀಸರಿಗೆ ಸಿಕ್ಕಿತ್ತು.
ಈ ಹಿನ್ನಲೆಯಲ್ಲಿ ಅ. 3 2008ರಂದು ಮಹಾರಾಷ್ಟ್ರ ಪೊಲೀಸರು ಉಳ್ಳಾಲದ ಮುಕ್ಕಚ್ಚೇರಿ, ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಮತ್ತು ಬಳಿಕ ಪಾಂಡೇಶ್ವರದ ಸುಭಾಸ್ನಗರ ಹಾಗೂ ಇತರ ಕಡೆಗಳಲ್ಲಿ ದಾಳಿ ನಡೆಸಿದ್ದರು.
ಈ ವೇಳೆ ಮುಕ್ಕಚ್ಚೇರಿಯ ಮಹಮ್ಮದ್ ಅಲಿ, ಜಾವೇದ್ ಅಲಿ, ಸುಭಾಸ್ನಗರದ ನೌಶಾದ್ ಮತ್ತು ಹಳೆಯಂಗಡಿಯ ಅಹ್ಮದ್ ಬಾವಾನನ್ನು ಬಂಧಿಸಿದ್ದರು. ಕೆಲವು ದಿನಗಳ ಬಳಿಕ ಮತ್ತೆ ಪಡುಬಿದ್ರೆಯ ಉಚ್ಚಿಲ ಮತ್ತು ಚಿಕ್ಕಮಗಳೂರು ಹಾಗೂ ಗುಜರಾತ್, ಮಹಾರಾಷ್ಟ್ರದಲ್ಲಿ ಕಾರ್ಯಚರಣೆ ನಡೆಸಿ ಪುನಃ 6 ಮಂದಿಯನ್ನು ಬಂಧಿಸಿದ್ದರು.
ಅಪರಾಧಿಗಳಾದ ಮಹ ಮ್ಮದ್ ಅಲಿ, ಆತನ ಪುತ್ರ ಜಾವೇದ್ ಅಲಿ, ನೌಶಾದ್ ಮತ್ತು ಅಹ್ಮದ್ ಬಾವಾರಿಂದ 5 ಬಾಂಬ್, 11.39 ಲಕ್ಷ ರೂ. ನಗದು, ಗುಜರಾತ್ನ ನಕ್ಷೆ, 21 ಮೊಬೈಲ್ ಫೋನ್, ಸಿಮ್ ಕಾರ್ಡ್ ಗಳು, ಜೆಹಾದಿ ಸಾಹಿತ್ಯ, ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, 4 ಪಾಸ್ಪೋರ್ಟ್ ಇತ್ಯಾದಿಗಳನ್ನು ವಸ್ತುಗಳನ್ನು ಪೊಲೀಸರು ವಶವಡಿಸಿಕೊಂಡಿದ್ದರು.
ಇನ್ನು ಎಪ್ರಿಲ್ 12, 2017ರಂದು ಸೈಯದ್ ಮೊಹಮದ್ ನೌಶಾದ್, ಅಹ್ಮದ್ ಬಾವಾ ಅಬೂಬಕರ್ ಮತ್ತು ಪಡುಬಿದ್ರೆಯ ಇನ್ನೋರ್ವ ಅಪರಾಧಿ ಸಹಿತ ಮೂವರಿಗೆ ಮಂಗಳೂರಿನ ನ್ಯಾಯಾಲಯವು ಕಠಿನ ಜೀವಾವಧಿ ಶಿಕ್ಷೆ ವಿಧಿಸಿತ್ತು, ಈ ವೇಳೆ ಅವರನ್ನು ಅಮಾಯಕರು ಎಂದು ಹೇಳುತ್ತಾ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದ ಇನ್ಸ್ಪೆಕ್ಟರ್ ವೆಂಕಟೇಶ ಪ್ರಸನ್ನ ಅವರ ವಿರುದ್ಧ ಕೆಲವು ಮಂದಿ ರಾಷ್ಟ್ರಪತಿ ಮತ್ತು ಪ್ರಧಾನಿವರೆಗೂ ದೂರು ನೀಡಲಾಗಿತ್ತು.