ಮೂಡಬಿದರೆ , ಫೆ 20 (DaijiworldNews/MS): ಸಿಬ್ಬಂದಿ ಕೊರತೆ ಕಾರಣದಿಂದಾಗಿ ಸರ್ಕಾರದ ಸೌಲಭ್ಯಗಳು ಅರ್ಹರಿಗೆ ತಲುಪುವಲ್ಲಿ ವಿಳಂಬವಾಗಬಾರದು ಎಂದು ಶಾಸಕರಾದ ಉಮನಾಥ್ ಕೋಟ್ಯಾನ್ ಅವರು ಹೇಳಿದರು.
ಅವರು ಫೆ.19ರ ಶನಿವಾರ ಮೂಡಬಿದರೆ ತಾಲೂಕಿನ ಪಾಲಡ್ಕ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ನ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಂದಾಯ ಇಲಾಖೆಯಲ್ಲಿ ದೀರ್ಘ ಕಾಲದಿಂದಲೂ ಕೆಲವೊಂದು ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿರುವ ಬಗ್ಗೆ ದೂರುಗಳು ಬಂದಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಅವುಗಳ ಇತ್ಯರ್ಥವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ, ಕೂಡಲೇ ಹಳೆಯ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಅರ್ಹರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಾತನಾಡಿ, ಕುಡಿಯುವ ನೀರು, ರಸ್ತೆ, ವಿದ್ಯುತ್ನಂತಹ ಮೂಲಭೂತ ಅವಶ್ಯಕತೆಗಳ ಬೇಡಿಕೆಗೆ ಹೆಚ್ಚುತ್ತಿದ್ದು, ಆದ್ಯತೆಯ ಮೇರೆಗೆ ಅವುಗಳ ಈಡೇರಿಕೆಗೆ ಕ್ರಮವಹಿಸಲಾಗುತ್ತಿದೆ, ಸುಪ್ರೀಂ ಕೋರ್ಟ್ ಹಾಗೂ ಸರ್ಕಾರದ ಸೂಚನೆಗಳನ್ವಯ ಡೀಮ್ಡ್ ಫಾರೆಸ್ಟ್ ಅರ್ಜಿಗಳ ವಿಲೇ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ತಹಸೀಲ್ದಾರ್ ಪುಟ್ಟರಾಜು, ಭೂದಾಖಲೆಗಳ ಉಪನಿರ್ದೇಶಕ ನಿರಂಜನ್, ಪಾಲಡ್ಕ ಪಂಚಾಯಿತಿ ಅಧ್ಯಕ್ಷ ದಿನೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ 94ಸಿಯಡಿ ನಿವೇಶನ ರಹಿತ 68 ಮಂದಿಗೆ ಹಕ್ಕುಪತ್ರ, 40 ಮಂದಿಗೆ ಬಿಪಿಎಲ್ ಪಡಿತರ ಚೀಟಿ ಹಾಗೂ ಅರ್ಹ ಫಲಾನುಭವಿಗಳಿಗೆ ವೃದ್ಯಾಪ್ಯ ವೇತನ ಪತ್ರವನ್ನು ವಿತರಿಸಲಾಯಿತು.