ಮಂಗಳೂರು, ಫೆ. 19 (DaijiworldNews/SM): ಉಡುಪಿಯ 6 ವಿದ್ಯಾರ್ಥಿನಿಯರ ಜೊತೆ, ಪೋಷಕರ ಜೊತೆ ನಾವು ಮೊದಲೇ ಚರ್ಚೆ ಮಾಡಿದ್ದೆವು. ಶರೀಯತ್ ಹಕ್ಕನ್ನು ವಿದ್ಯಾರ್ಥಿನಿಯರಿಗೆ ನೀಡುವಂತೆ ಪ್ರಾಂಶುಪಾಲರಿಗೆ ಮನವಿ ಮಾಡಿದ್ದೆವು. ಅಲ್ಲದೆ, ವಿದ್ಯಾರ್ಥಿನಿಯರಿಗೂ ಶಿಕ್ಷಣ ಮುಂದುವರಿಸುವಂತೆ ಬುದ್ಧಿವಾದ ಹೇಳಿದ್ದೆ ಎಂದು ಮಂಗಳೂರಿನಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಆರಂಭದಲ್ಲಿ ಹಿಜಾಬ್ ವಿವಾದ ಬಂದಾಗ ಮಾತಾಡಿದ್ದೇ ವಕ್ಫ್ ಮಂಡಳಿ. ಅಲ್ಲದೆ ನಾನು ಶಾಸಕ ರಘುಪತಿ ಭಟ್ ಜೊತೆಗೆ ಮಾತಾಡಿದ್ದೇನೆ. ಆರು ಮಂದಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬಂದಾಗ ಅವಕಾಶ ಕೊಡಿ ಎಂದು ನಾನೇ ಪ್ರಾಂಶುಪಾಲರಿಗೆ ಹೇಳಿದ್ದೆ. ಅಲ್ಲದೆ ಹೆಣ್ಮಕ್ಕಳಿಗೆ ನಾನು ಬುದ್ದಿಮಾತು ಹೇಳಿದ್ದೆ. ವಿದ್ಯಾಸಂಸ್ಥೆಗಳಲ್ಲಿ ಕೋಮುವಾದದ ಬಣ್ಣ ಕಾಣಿಸಿಕೊಂಡಿರುವುದು ದುರಂತ. ಸಾಮಾಜಿಕ ಶಾಂತಿ ಕದಡುವ ಶಕ್ತಿಗಳಿಗೆ ಶಿಕ್ಷೆ ನೀಡಬೇಕಾಗಿದೆ. ಇನ್ನು ಈ ವಿವಾದದ ಕುರಿತು ಶಿಕ್ಷಣ ಸಚಿವರ ಜೊತೆಗೆ ಮಾತಾಡಿದ್ದೇನೆ. ಇದೊಂದು ಶರೀಯತ್ತ್ ವ್ಯವಸ್ಥೆ ಆಗಿದೆ. ಹೀಗಾಗಿ ವಿದ್ಯಾರ್ಥಿನಿಯರಿಗೆ ನಾನು ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಹೇಳಿದ್ದೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.